ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಮಾರಕ ವೈರಸ್ಗೆ ಅನೇಕ ಮಂದಿ ಜೀವ ತೆತ್ತಿದ್ದಾರೆ. ದೆಹಲಿಯ ಗೋಕುಲ್ಪುರಿ ಏರಿಯಾದಲ್ಲಿ ಕೊರೊನಾದಿಂದ ಮೃತರಾದ 35 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವಲ್ಲಿ ನೆರವಾದ ಎಎಸ್ಐ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ.
ಎಲೆಕ್ಟ್ರಿಷಿಯನ್ ಆಗಿದ್ದ ಸೋನುಕುಮಾರ್ ಎಂಬವರು ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಸೋಂಕು ತಗುಲುತ್ತದೆ ಎಂಬ ಭಯಕ್ಕೆ ಮೃತ ವ್ಯಕ್ತಿಯ ತಾಯಿ ಹಾಗೂ ಪತ್ನಿ ಸಹ ಶವವನ್ನ ಸ್ವೀಕರಿಸಲು ಹಿಂಜರಿದಿದ್ರು. ಗೋಕುಲಪುರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಸುಶೀಲ್ ಕುಮಾರ್, ಮನೆಯಲ್ಲಿದ್ದ ಸೋನು ಮೃತ ದೇಹದ ಬಳಿ ಧಾವಿಸಿದ್ದಾರೆ.
ಕೂಡಲೇ ಖಾಸಗಿ ಆಂಬುಲೆನ್ಸ್ ಮೂಲಕ ಜಿಟಿಬಿ ಆಸ್ಪತ್ರೆಗೆ ಶವದ ಸಮೇತ ಸುಶೀಲ್ ಆಗಮಿಸಿದ್ದಾರೆ. ಅಲ್ಲಿಂದ ಮೃತದೇಹವನ್ನ ಡಾ. ಹೆಡ್ಗೆವಾರ್ ಆರೋಗ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಅಶೋಕ್ ನಗರದಲ್ಲಿರುವ ಸ್ಮಶಾನಕ್ಕೆ ಶವವನ್ನ ಕೊಂಡೊಯ್ದ ಎಎಸ್ಐ ಸುಶೀಲ್ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಎಎಸ್ಐ ಸುಶೀಲ್ ಕುಮಾರ್, ಸೋನು ವಿಪರೀತ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು, ಇದಕ್ಕಾಗಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಏಪ್ರಿಲ್ 19ರಂದು ಅವರ ಸ್ಥಿತಿ ಇನ್ನಷ್ಟು ಕ್ಷೀಣಿಸಿದ್ದು ಅವರ ದೆಹಲಿಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಹಾಸಿಗೆ ಹಾಕಿ ಆಕ್ಸಿಜನ್ ಕೊರತೆ ಹಿನ್ನೆಲೆ ಸೋನುರನ್ನ ಆಸ್ಪತ್ರೆಯಿಂದ ವಾಪಸ್ ಕಳಿಸಲಾಗಿತ್ತು. ಮನೆಗೆ ವಾಪಸ್ಸಾದ ಸೋನು ಕೊನೆಯುಸಿರೆಳೆದಿದ್ದರು.
ಕೊರೊನಾ ಸೋಂಕು ಹರಡುತ್ತೆ ಎಂದು ನೆರೆಹೊರೆಯವರು ಬೆದರಿಸಿದ ಹಿನ್ನೆಲೆ ಸೋನು ಕುಟುಂಬಸ್ಥರು ಶವವನ್ನ ಮುಟ್ಟಲು ನಿರಾಕರಿಸಿದ್ದಾರೆ. ಮೃತ ಸೋನು 12 ವರ್ಷದ ಮಗನನ್ನ ಹೊಂದಿದ್ದಾರೆ.