ಕೊರೊನಾ ವೈರಸ್ ಗೊಂದಲದ ನಡುವೆ ಬಹಳ ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ಸಿಬ್ಬಂದಿಗೆ ಬಿಡುವು ಎಂದರೇನು ಎಂದು ಕೇಳುವಂತಾಗಿದೆ. ಕಳೆದ 5-6 ತಿಂಗಳುಗಳಿಂದ ಇವರದ್ದು ದಣಿವರಿಯದ ದುಡಿಮೆ ಆಗಿಬಿಟ್ಟಿದೆ.
ಈ ಕುರಿತು ಸಾಕಷ್ಟು ಮನಮುಟ್ಟುವ ಫೋಟೋಗಳು/ವಿಡಿಯೋಗಳು/ಮೆಮೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಲಕರಣೆ (PPE) ಧರಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದೇ ಇದೆ.
ಹಲವು ಸುತ್ತುಗಳ ಪ್ಲಾಸ್ಟಿಕ್ ಸೂಟ್‌ಗಳನ್ನು ಮೈಮೇಲೆ ಹಾಕಿಕೊಳ್ಳುವುದು ತ್ರಾಸದಾಯಕ ಕೆಲಸ. ಈ ಅನುಭವ ಹೇಗೆಲ್ಲಾ ಇರುತ್ತದೆ ಎಂದು ಖುದ್ದು ವೈದ್ಯರಾದ ಡಾ. ಸೈಯ್ಯದ್ ಫೈಜಾನ್ ಅಹಮದ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ವಿಪರೀತ ಆರ್ದ್ರಮಯ ವಾತಾವರಣದಲ್ಲಿ, ಪಿಪಿಇ ಧರಿಸಿ ವಿಪರೀತ ಬೆವರಿದ ಬಳಿಕ ನನ್ನ ಕೈಗಳು ಹೀಗೆ ಕಾಣುತ್ತಿವೆ” ಎಂದು ಫೈಜಾನ್ ತಿಳಿಸಿದ್ದಾರೆ.