ದೆಹಲಿಯ ಬಿಜೆಪಿ ಮುಖಂಡ ತಮ್ಮ ನಿವಾಸದ ಬಳಿಯ ಪಾರ್ಕ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನ ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್. ಬಾವಾ ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಬಿಜೆಪಿ ಮುಖಂಡ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಮೂಲಗಳು ತಿಳಿಸಿದೆ.
ಆದರೆ ಪೊಲೀಸರು ಹಾಗೂ ಪಕ್ಷದ ಇತರೆ ನಾಯಕರು ಈ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.
58 ವರ್ಷದ ಬಾವಾ ಪಶ್ಚಿಮ ದೆಹಲಿಯ ಫತೇ ನಗರದ ನಿವಾಸಿಯಾಗಿದ್ದರು. ಸೋಮವಾರ ಸಂಜೆ ಸುಮಾರಿಗೆ ಬಾವಾರ ಮೃತದೇಹ ಸುಭಾಷ್ ನಗರದ ಪಾರ್ಕ್ನ ಕೊಳದ ಸಮೀಪದಲ್ಲಿ ಗ್ರಿಲ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿದ ಪೊಲೀಸರು ಪಾರ್ಕ್ಗೆ ಆಗಮಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಸದ್ಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.