ನವದೆಹಲಿ: ಟೊಮೆಟೊಗೆ ಬಂಗಾರದ ಬೆಲೆ ಬಂದಿರುವ ಬೆನ್ನಲ್ಲೇ ಇಲ್ಲೋರ್ವ ಮಗಳು ತನ್ನ ತಾಯಿ ಆಸೆ ಈಡೇರಿಸಲು ದುಬೈನಿಂದ ಟೊಮೆಟೊ ಪಾರ್ಸಲ್ ತಂದಿರುವ ಘಟನೆ ನಡೆದಿದೆ.
ದುಬೈನಿಂದ ಭಾರತಕ್ಕೆ ಬಂದಿರುವ ಮಹಿಳೆಯೊಬ್ಬರು ಬರೋಬ್ಬರಿ 10 ಕೆಜಿ ಟೊಮೆಟೊವನ್ನು ಪ್ಯಾಕ್ ಮಾಡಿ ಸೂಟ್ ಕ್ಯಾಸ್ ನಲ್ಲಿ ತಂದಿದ್ದಾರೆ. ಈ ಕುರಿತ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ರಜೆ ದಿನಗಳನ್ನು ಕಳೆಯಲೆಂದು ಮಕ್ಕಳೊಂದಿಗೆ ದುಬೈನಿಂದ ಭಾರತಕ್ಕೆ ಹೊರಟ ಮಹಿಳೆ ತನ್ನ ತಾಯಿಗೆ ಕರೆ ಮಾಡಿ ದುಬೈನಿಂದ ಏನು ತರಬೇಕು ಎಂದು ಕೇಳಿದ್ದಾಳೆ. ಇದಕ್ಕೆ ಭಾರತದಲ್ಲಿ ಟೊಮೆಟೊ ಬೆಲೆ ಗಗನಮುಖಿಯಾಗಿರುವ ಬಗ್ಗೆ ತಾಯಿ ಹೇಳಿದ್ದಾಳೆ. ಅಲ್ಲದೇ 10ಕೆಜಿ ಟೊಮೆಟೊ ತರುವಂತೆ ಹೇಳಿದ್ದಾರೆ. ಅಮ್ಮನ ಮಾತಿನಂತೆ ಮಹಿಳೆ ದುಬೈನಿಂದ 10 ಕೆಜಿ ಟೊಮೆಟೊವನ್ನು ಸೂಟ್ ಕೇಸ್ ನಲ್ಲಿ ತಂದಿದ್ದಾಳೆ. ಈ ಬಗ್ಗೆ ಮಹಿಳೆಯ ಸಹೋದರಿ ತನ್ನ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿವಿಧ ಬಗೆಯ ಪ್ರತಿಕ್ರಿಯೆಗಳು ಬರುತ್ತಿವೆ.
ಅದರಲ್ಲೂ ಒಬ್ಬರು ಹಣದುಬ್ಬರದ ಈ ಸಂದರ್ಭದಲ್ಲಿ ದುಬೈನಿಂದ ಟೊಮೆಟೊ ತಂದ ಮಗಳಿಗೆ ಅತ್ಯುತ್ತಮ ಮಗಳು ಅವಾರ್ಡ್ ಕೊಡಬೇಕು ಎಂದಿದ್ದಾರೆ.