ಸಾಮಾನ್ಯವಾಗಿ ಪಾಲಿಕೆ ಮೇಯರ್ ಅಂದ್ರೆ ಕಾರಲ್ಲಿ ಓಡಾಡ್ತಾರೆ. ಏನಾದ್ರೂ ಅವಘಡ ಆಯ್ತು ಅಂದಲ್ಲಿ ಮಾತ್ರ ಆ ಕ್ಷೇತ್ರಕ್ಕೊಂದು ವಿಸಿಟ್ ಕೊಡ್ತಾರೆ. ಆದರೆ ಕೊಲ್ಹಾಪುರ ಮುನ್ಸಿಪಲ್ ಕಾರ್ಪೋರೇಷನ್ನ ಉಪಮೇಯರ್ ಈ ಎಲ್ಲಾ ಅಪವಾದಗಳಿಗೆ ವಿರುದ್ಧವಾಗಿ ನಿಂತಿದ್ದಾರೆ.
ಬೆಳಗ್ಗೆ 7 ಗಂಟೆಗೆ ಸೈಕಲ್ನಲ್ಲಿ ಸವಾರಿ ಶುರು ಮಾಡುವ ಸಂಜಯ್ ಮೋಹಿತೆ ಸಣ್ಣ ಗಲ್ಲಿಯಿಂದ ಹಿಡಿದು ದೊಡ್ಡ ನಗರದವರೆಗೆ ಸಂಚರಿಸಿ ಜನರ ಕಷ್ಟವನ್ನ ಖುದ್ದು ಆಲಿಸ್ತಾರೆ.
ಕಾಂಗ್ರೆಸ್ ಪಕ್ಷದ ಈ ನಾಯಕ ಕಳೆದ 5 ವರ್ಷಗಳಿಂದ ಪ್ರತಿದಿನ ಬೆಳಗ್ಗೆ 2 ಗಂಟೆಗಳ ಸಮಯವನ್ನ ಸೈಕಲ್ ಸವಾರಿಗಾಗಿ ಮೀಸಲಿಟ್ಟಿದ್ದಾರೆ. ದಿನಾ ಮನೆಗೆ ನ್ಯೂಸ್ ಪೇಪರ್ ಹಾಕುವ ಹುಡುಗನಿಂದ ಹಿಡಿದು ವೃದ್ಧರವರೆಗೂ ಸಂಜಯ್ ಎಲ್ಲರ ಕಷ್ಟವನ್ನ ಆಲಿಸ್ತಾರೆ.
ಚರಂಡಿ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ ದುರಸ್ಥಿ ಕಾರ್ಯ ಹೀಗೆ ತನ್ನ ಸೈಕಲ್ ಸವಾರಿ ವೇಳೆಗೆ ಬೆಳಕಿಗೆ ಬಂದ ಎಲ್ಲಾ ಸಮಸ್ಯೆಗಳನ್ನ ಉಪಮೇಯರ್ ಅತ್ಯಂತ ಶೀಘ್ರದಲ್ಲಿ ಪರಿಹಾರ ಮಾಡುವ ಮೂಲಕ ಜನರ ಅಚ್ಚುಮೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಉಪಮೇಯರ್ ಸಂಜಯ್, ನಾನು ಗಾಂಧೀಜಿಯವರ ಸರಳತೆಯಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡುತ್ತಿದ್ದೇನೆ. ನನ್ನ ನಿತ್ಯದ ಸೈಕಲ್ ಸವಾರಿಯಿಂದಾಗಿ ಇಡೀ ವಾರ್ಡ್ ಜನರು ನನ್ನನ್ನ ವೈಯಕ್ತಿಕವಾಗಿ ಅರ್ಥ ಮಾಡಿಕೊಳ್ತಾರೆ ಎಂದು ಹೇಳಿದ್ರು.