ಬೆಂಗಳೂರು: ಕೊರೊನಾ ಸೋಂಕಿನಿಂದ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಮಿದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕು ತಗುಲಿದವರು ಬ್ರೈನ್ ಸ್ತ್ರೋಕ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕಿನಿಂದ ಲಕ್ಷಾಂತರ ಜನ ಗುಣಮುಖರಾಗಿದ್ದರೂ ದೀರ್ಘಾವಧಿಯಲ್ಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ನರರೋಗ ತಜ್ಞರು ಹೇಳಿದ್ದಾರೆ. ರೋಗ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಸೋಂಕಿಗೆ ತುತ್ತಾದವರ ಮೇಲೆ ಕೊರೊನಾ ವೈರಸ್ ತೀವ್ರ ಪರಿಣಾಮ ಬೀರುತ್ತದೆ.
ಉಸಿರಾಟದ ಸಮಸ್ಯೆ ಜೊತೆಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಮಿದುಳಿಗೆ ರಕ್ತ ಸರಬರಾಜಾಗುವ ಪ್ರಕ್ರಿಯೆಯಲ್ಲಿ ಅಡೆತಡೆಯುಂಟಾಗಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ. ಕಣ್ಣಿನ ಸಮಸ್ಯೆಯೂ ಉಂಟಾಗಬಹುದು ಎನ್ನಲಾಗಿದೆ.
ಮಧುಮೇಹ, ಅಧಿಕ ರಕ್ತದೊತ್ತಡ, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇಂತಹ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೋಂಕಿನಿಂದ ರಕ್ತನಾಳಗಳಿಗೆ ಹಾನಿಯಾದರೆ ರಕ್ತ ಹೆಪ್ಪುಗಟ್ಟುತ್ತದೆ. ಹೆಪ್ಪುಗಟ್ಟಿದ ರಕ್ತದ ಅಂಶಗಳು ಮಿದುಳಿಗೆ ತಲುಪಿದಾಗ ಮಿದುಳಿನ ಕಾರ್ಯ ಕಡಿಮೆಯಾಗಿ ಅಗತ್ಯವಾಗಿ ಬೇಕಾದ ಆಮ್ಲಜನಕ ಸಿಗದೇ ಪಾರ್ಶ್ವವಾಯು ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.