ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.
ರೈತರೊಂದಿಗಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈತರೊಂದಿಗೆ ಮಾತುಕತೆಗೆ ನಡೆಸಲು ಒತ್ತು ನೀಡಿದ್ದು, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ಶನಿವಾರ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕೆಲ ಸುಧಾರಣೆಗಳನ್ನ ತರಲಿಕ್ಕೋಸ್ಕರ ಈ ಮಸೂದೆಯನ್ನ ಜಾರಿಗೆ ತಂದಿದೆ. ಆದರೆ ಕೆಲ ರೈತರು ಈ ಮಸೂದೆಯ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮಸೂದೆಯನ್ನ ವಿರೋಧಿಸುತ್ತಿರುವ ರೈತರು ಸರ್ಕಾರದೊಂದಿಗೆ ಚರ್ಚೆ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ ಅಂತಾ ಆಸ್ಸಾಂನ ಕಮ್ರೂಪ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಗುರುವಾರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಪ್ರತಿಭಟನಾ ನಿರತ ಸಂಘಗಳಿಗೆ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿದ್ದರು. ಇದೀಗ ಅಮಿತ್ ಶಾ ಕೂಡ ರೈತರಿಗೆ ಚರ್ಚೆಗೆ ಆಗಮಿಸುವಂತೆ ಕರೆ ನೀಡಿದ್ದಾರೆ.