ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲೆಡೆ ಲಾಕ್‌ಡೌನ್ ಆಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಪಾಠ ಹೇಳಿಕೊಡುವುದು ದೊಡ್ಡ ಸವಾಲಾಗಿಬಿಟ್ಟಿದೆ. ನಗರ ಪ್ರದೇಶಗಳ ಉಳ್ಳವರ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡಬಹುದಾಗಿದೆ. ಆದರೆ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಪಾಠ ಹೇಳಿಕೊಡುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಛತ್ತೀಸ್‌ಘಡದ ಕೋರಿಯ ಜಿಲ್ಲೆಯ ಫಟ್‌ಪಾನಿ ಪ್ರದೇಶದ ಅಶೋಕ್ ಲೋಧಿ ಎಂಬ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತಮ್ಮ ಬೈಕ್‌ನಲ್ಲಿ ಕುಳಿತುಕೊಂಡು ಬೆನ್ನಿಗೆ ಎಲ್‌ಇಡಿ ಟಿವಿಯೊಂದನ್ನು ಕಟ್ಟಿಕೊಂಡು, ಕಾರ್ಟೂನ್ ಹಾಗೂ ಹಾಡುಗಳ ಮೂಲಕ ಮಕ್ಕಳಿಗೆ ಜ್ಞಾನವರ್ಧನೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ತಮ್ಮ ಈ ಸತ್ಕಾರ್ಯದಿಂದಾಗಿ ಲೊಧಿಗೆ ’ಸಿನೆಮಾ ವಾಲೇ ಬಾಬು’ ಎಂದು ಇಲ್ಲಿನ ಜನರು ಪ್ರೀತಿಯಿಂದ ಕರೆಯುತ್ತಾರೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪಾಠ ಹೇಳಿಕೊಡುವ ಲೋಧಿ ಮಾಸ್ತರರಿಗೆ ತಮ್ಮ ಈ ಕೈಂಕರ್ಯದಿಂದ ಬಹಳ ಸಂತೃಪ್ತಿ ಸಿಗುತ್ತಿದೆಯಂತೆ. ಲೋಧಿ ಕೆಲಸ ಮಾಡುವ ಸಂಸ್ಥೆಯಿಂದ ಟಿವಿ ಕೊಡಲಾಗಿದ್ದು, ಸ್ಥಳೀಯ ಆಡಳಿತದ ಬೆಂಬಲವೂ ಇದೆ.