ತ್ವರಿತವಾಗಿ ಸಾಲ ನೀಡುವ ಅಪ್ಲಿಕೇಶನ್ ಮೂಲಕ ಜನರನ್ನ ವಂಚಿಸುತ್ತಿದ್ದ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನ ಸೈಬರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಸೈಬರಾಬಾದ್ನಲ್ಲಿದ್ದ ಕ್ಯುಬೆವೊ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್(ಸ್ಕೈಲೈನ್) ಎಂಬ ಕಾಲ್ಸೆಂಟರ್ ಮೇಲೆ ದಾಳಿ ಮಾಡಿದ ಪೊಲೀಸರು ಈ ನಾಲ್ವರನ್ನ ಬಂಧಿಸಿದ್ದಾರೆ.
ಪೊಲೀಸರು ಹೇಳುವಂತೆ ಈ ಕಂಪನಿಯ ಮುಖ್ಯ ಕಚೇರಿ ದೆಹಲಿಯಲ್ಲಿ ಸ್ಕೈಲೈನ್ ಇನ್ನೋವೇಶನ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿದೆ.
ಈ ಕಂಪನಿ ಮೊಬೈಲ್ ಅಪ್ಲಿಕೇಶನ್ ಹೊಂದಿದ್ದು ಜನರಿಗೆ ತ್ವರಿತ ಸಾಲವನ್ನ ನೀಡುತ್ತೆ. ಆದರೆ ಬಡ್ಡಿ, ಸಂಸ್ಕರಣಾ ಶುಲ್ಕ, ಜಿಎಸ್ಟಿ, ಸಾಲದ ಅವಧಿ ಮುಗಿದ ಬಳಿಕ 1 ಪ್ರತಿಶತ ಚಕ್ರಬಡ್ಡಿ ಸೇರಿದಂತೆ ಹಲವಾರು ನಿಯಮಗಳನ್ನೊಡ್ಡಿ ಜನರಿಂದ ದುಪ್ಪಟ್ಟು ಹಣ ಸಂಗ್ರಹಿಸಲಾಗುತ್ತಿತ್ತು. ಕಾಲ್ಸೆಂಟರ್ ಮೂಲಕ ಗ್ರಾಹಕರಿಗೆ ಕರೆ ಮಾಡಿ ನಿಂದನೆ ಮಾಡೋದು ಹಾಗೂ ಕುಟುಂಬ ಸದಸ್ಯರಿಗೆ ನಕಲಿ ಸಾಲದ ನೋಟಿಸ್ಗಳನ್ನ ಕಳುಹಿಸೋ ಮೂಲಕ ಕಿರುಕುಳ ನೀಡುತ್ತಿದ್ದರು. ಈ ಕಂಪನಿ ವಿರುದ್ಧ 8 ದೂರುಗಳನ್ನ ಸ್ವೀಕರಿಸಿದ್ದ ಸೈಬರಾಬಾದ್ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.