ಪ್ರಾಮಾಣಿಕತೆಯ ಬಗ್ಗೆ ಶಾಲಾ ಪಠ್ಯಗಳಲ್ಲಿ ಬರುವ ನೀತಿ ಪಾಠಗಳನ್ನು ಓದಿಕೊಂಡೇ ನಾವೆಲ್ಲಾ ಬೆಳೆದಿದ್ದೇವೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಮಂದಿ ನಿಜವಾಗಲೂ ಪ್ರಾಮಾಣಿಕರಾಗಿರುತ್ತಾರೆ?
ಚೆನ್ನೈನ ವ್ಯಕ್ತಿಯೊಬ್ಬರು ತಮ್ಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಮರೆತುಹೋಗಿದ್ದ ಚಿನ್ನದ ಒಡವೆ ಹಾಗೂ 20 ಲಕ್ಷ ರೂ.ಗಳ ನಗದನ್ನು ಅವರಿಗೇ ಮರಳಿಸುವ ಮೂಲಕ ನಿಜ ಜೀವನದಲ್ಲೂ ಆದರ್ಶ ಮೆರೆದಿದ್ದಾರೆ.
ಉದ್ಯಮಿ ಪೌಲ್ ಬ್ರೈಟ್‌ರನ್ನು ಚೆನ್ನೈನ ಕ್ರೋಂಪೇಟ್ ಪ್ರದೇಶಕ್ಕೆ ಡ್ರಾಪ್ ಮಾಡುತ್ತಿದ್ದರು ಸರವಣ ಕುಮಾರ್ ಹೆಸರಿನ ರಿಕ್ಷಾ ಚಾಲಕ. ಪ್ರಯಾಣದ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಪೌಲ್, ತಮ್ಮ ಬ್ಯಾಗ್ ಮರೆತು ಹೋಗಿದ್ದರು. ಕೆಲ ಹೊತ್ತಿನ ಬಳಿಕ ರಿಕ್ಷಾ ಸೀಟಿನ ಮೇಲೆ ಪೌಲ್ ಬ್ಯಾಗ್ ಸಿಕ್ಕಿದ ಕೂಡಲೇ ಅದನ್ನು ಅವರಿಗೆ ಹೇಗೆ ಹಿಂದಿರುಗಿಸಬೇಕು ಎಂಬ ಬಗ್ಗೆ ಚಿಂತೆ ಶುರುವಾಯಿತು.
ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…!
ತಾವು ಆ ಬ್ಯಾಗನ್ನು ಮರೆತು ಬಂದ ವಿಷಯ ಅರಿವಿಗೆ ಬಂದ ಕೂಡಲೇ ಪೌಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆ ಸಮಾರಂಭದ ಮದುಮಗಳಿಗೆ ಕೊಡಲೆಂದು ಬ್ಯಾಗ್‌ನಲ್ಲಿ ಚಿನ್ನಾಭರಣಗಳನ್ನು ಇಡಲಾಗಿತ್ತು.
ಪೌಲ್ ಪಯಣಿಸಿದ ಮಾರ್ಗದಲ್ಲಿ ಸಿಕ್ಕ ಸಿಸಿ ಟಿವಿ ಕ್ಯಾಮೆರಾ ತುಣುಕುಗಳನ್ನು ವೀಕ್ಷಿಸಿದ ಪೊಲೀಸರು, ಸರವಣ ಅವರ ಆಟೋ ರಿಕ್ಷಾ ಟ್ರೇಸ್ ಮಾಡಿದ್ದಾರೆ. ಈ ಆಟೋ ಸರವಣ ಅವರ ಸಹೋದರಿ ಹೆಸರಿನಲ್ಲಿ ನೋಂದಣಿಯಾಗಿದ್ದ ವಿಚಾರ ತಿಳಿದು ಆಕೆಯ ಮನೆಗೆ ಹೊರಡಲು ಪೊಲೀಸರು ಸಜ್ಜಾಗುತ್ತಲೇ ಖುದ್ದು ತಾವೇ ಠಾಣೆಗೆ ಬಂದ ಸರವಣ ಚಿನ್ನಾಭರಣಗಳಿದ್ದ ಬ್ಯಾಗನ್ನು ತಂದು ಒಪ್ಪಿಸಿದ್ದಾರೆ.
ಸರವಣರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡ ಪೊಲೀಸರು ಆತನಿಗೆ ಹೂವಿನ ಬೊಕೆ ಕೊಟ್ಟು ಸನ್ಮಾನಿಸಿದ್ದಾರೆ.