ದೇಶದಲ್ಲಿ ಕೊರೊನಾ ಎರಡನೆ ಅಲೆಯ ಆರ್ಭಟ ಜೋರಾಗಿದೆ. ಕೋವಿಡ್ 19 ಸೋಂಕಿನಿಂದ ಜನರ ಆರೋಗ್ಯ ಕಾಪಾಡುವ ಸಲುವಾಗಿ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ.
ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಮಾಸ್ಟರ್ ಶೆಫ್ ಸಂಜೀವ್ ಕಪೂರ್ ಸಹ ಕೈಜೋಡಿಸಿದ್ದಾರೆ. ವರ್ಲ್ಡ್ ಸೆಂಟರ್ ಕಿಚನ್ ಹಾಗೂ ತಾಜ್ ಹೋಟೆಲ್ ಜೊತೆ ಸೇರಿ ಮುಂಬೈ, ದೆಹಲಿ, ಗುರುಗ್ರಾಮ್, ಕೋಲ್ಕತ್ತಾ, ಗೋವಾ, ಅಹಮದಾಬಾದ್ ಹಾಗೂ ಹೈದರಾಬಾದ್ನ ಆರೋಗ್ಯ ಸಿಬ್ಬಂದಿಗೆ ಉಚಿತ ಊಟವನ್ನ ನೀಡುತ್ತಿದ್ದಾರೆ ಎನ್ನಲಾಗಿದೆ.
ಪ್ರತಿನಿತ್ಯ ಇವರು 10 ಸಾವಿರ ಊಟಗಳನ್ನ 7 ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡುತ್ತಿದ್ದಾರೆ. ಅಲ್ಲದೇ ಈ ಊಟದಲ್ಲಿ ಪೋಷಕಾಂಶ ಅಗಾಧ ಪ್ರಮಾಣದಲ್ಲಿ ಇರುವಂತೆ ಕಾಳಜಿ ವಹಿಸಲಾಗಿದೆ. ಜೊತೆಗೆ ಈ ಊಟವನ್ನ ತಯಾರಿಸುವಾಗ ಹಾಗೂ ವಿತರಣೆ ಮಾಡುವಾಗ ಸ್ವಚ್ಛತೆಯನ್ನ ಕಾಯ್ದುಕೊಳ್ಳಲಾಗುತ್ತಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಾಸ್ಟರ್ಶೆಫ್ ಸಂಜೀವ್ ಕಪೂರ್, ಆಸ್ಪತ್ರೆಯಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪೋಷಕಾಂಶಗಳಿಂದ ಕೂಡಿದ ಸ್ವಾದಿಷ್ಟಕರ ಊಟವನ್ನ ನೀಡೋದು ನಮ್ಮ ಇರಾದೆಯಾಗಿದೆ. ಅಲ್ಲದೇ ವೈದ್ಯಲೋಕದ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಊಟವನ್ನ ಮಾಡಲು ಆಗೋದಿಲ್ಲ. ಹೀಗಾಗಿ ದೀರ್ಘಕಾಲದವರೆಗೆ ಆಹಾರ ಕೆಡದಂತೆಯೂ ನೋಡಿಕೊಳ್ಳಲಾಗ್ತಿದೆ ಎಂದು ಹೇಳಿದ್ದಾರೆ.