ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ಮಾದರಿಯ ನಿಬಂಧನೆಗಳನ್ನ ವಿಧಿಸಲಾಗಿದೆ.
ಒಡಿಶಾದಲ್ಲೂ ಸದ್ಯ ಇದೇ ಮಾದರಿಯ ಪರಿಸ್ಥಿತಿ ಇದೆ. ಪುರಿ – ಭುವನೇಶ್ವರ ಹೆದ್ದಾರಿಯಲ್ಲಿ ಬರುವ ಕೌಸಲ್ಯಾಗಂಜ್ನಲ್ಲಿ ವ್ಯಕ್ತಿಯೊಬ್ಬ ರಸ್ತೆ ಅಪಘಾತಕ್ಕೀಡಾಗಿದ್ದ. ಸಹಾಯಕ್ಕಾಗಿ ಅಂಗಲಾಚೋಣ ಅಂದರೆ ಲಾಕ್ಡೌನ್ನಿಂದಾಗಿ ಸಂಪೂರ್ಣ ರಸ್ತೆ ನಿರ್ಜನವಾಗಿತ್ತು. ಈ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದಿದ್ದ ಐಎಎಸ್ ಅಧಿಕಾರಿ ಡಾ. ಕೃಷ್ಣನ್ ಕುಮಾರ್ ಅಪಘಾತಕ್ಕೀಡಾದ ವ್ಯಕ್ತಿಯನ್ನ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮುಖ್ಯ ಆಡಳಿತಗಾರರೂ ಆಗಿರುವ ಐಎಎಸ್ ಅಧಿಕಾರಿ ಪುರಿ ರಥಯಾತ್ರೆಗಾಗಿ ನಿರ್ಮಾಣವಾಗುತ್ತಿರುವ ರಥವನ್ನ ಪರಿಶೀಲಿಸಲು ತೆರಳಿದ್ದರು. ಈ ಕಾರ್ಯವನ್ನ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಮಾರ್ಗಮಧ್ಯದಲ್ಲಿ ಅಪಘಾತವನ್ನ ಕೃಷ್ಣನ್ ಕಂಡಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ವ್ಯಕ್ತಿಯನ್ನ ತನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದ್ರು.
ರತ್ನಾಕರ್ ಎಂಬಾತನಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ನಿರ್ಜನ ರಸ್ತೆಯಲ್ಲಿ ರತ್ನಾಕರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಸಹ ವಾಹನ ಚಾಲಕ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದ. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಐಎಎಸ್ ಅಧಿಕಾರಿ ರತ್ನಾಕರ್ ಪ್ರಾಣವನ್ನ ಕಾಪಾಡಿದ್ದಾರೆ.