ನೆಲ್ಲೂರು: ಪೆನ್ನಾ ನದಿಯಲ್ಲಿ ಮರಳು ತೆಗೆಯುವ ವೇಳೆ ಪುರಾತನ ಶಿವ ದೇವಾಲಯವೊಂದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಚೆಜಾರ್ಲ ಮಂಡಲ ಸಮೀಪದ ಪೆರಮಲ್ಲಪಡು ಗ್ರಾಮದಲ್ಲಿ ಪತ್ತೆಯಾಗಿದೆ.
ಇದು ಸುಮಾರು 200 ವರ್ಷಗಳ ಹಳೆಯ ದೇವಳವಾಗಿದೆ. ಪೆನ್ನಾ ನದಿಯ ದಡದಲ್ಲಿ ನಿರ್ಮಾಣ ಮಾಡಿದ 101 ದೇವಾಲಯಗಳಲ್ಲಿ ಇದೂ ಒಂದು ಎಂದು ಗ್ರಾಮಸ್ಥರು ಹೇಳುತ್ತಾರೆ.
1850 ರಲ್ಲಿ ನದಿಯಲ್ಲಿ ಬಂದ ಪ್ರವಾಹದ ವೇಳೆ ದೇವಸ್ಥಾನ ಮರಳಿನಲ್ಲಿ ಮುಚ್ಚಿ ಹೋಗಿರಬಹುದು ಎಂದು ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ರಾಮಸುಬ್ಬ ರೆಡ್ಡಿ ಆಂಗ್ಲ ದೈನಿಕ ʼದ ಹಿಂದುʼ ಗೆ ಹೇಳಿಕೆ ನೀಡಿದ್ದಾರೆ. ವಿಸ್ತೃತ ಅಧ್ಯಯನ ನಡೆಸಿ ದೇವಾಲಯ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇಟ್ಟಿಗೆಗಳಿಂದ ನಿರ್ಮಾಣವಾದ ದೇವಸ್ಥಾನದ ತಳಮಟ್ಟದವರೆಗೆ ಕಾಣುವಂತೆ ಮರಳನ್ನು ತೆರವು ಮಾಡಲು ಗ್ರಾಮಸ್ಥರು ಈಗ ಪ್ರಯತ್ನ ನಡೆಸಿದ್ದಾರೆ.