ಕೇರಳದ ಕೊಚ್ಚಿಯಲ್ಲಿರುವ ಸಿರೋ ಮಲಬಾರ್ ಚರ್ಚ್ನಲ್ಲಿ ಮೂವರು ಸದಸ್ಯರುಳ್ಳ ವಿಚಾರಣಾ ಆಯೋಗವು ಮುಸ್ಲಿಂ ಪುರುಷ ಹಾಗೂ ಕ್ಯಾಥೋಲಿಕ್ ಮಹಿಳೆ ನಡುವೆ ನಡೆದ ಅಂತರ್ ಧರ್ಮೀಯ ವಿವಾಹವನ್ನ ಅಮಾನ್ಯವೆಂದು ಘೋಷಣೆ ಮಾಡಿದೆ. ಮಾತ್ರವಲ್ಲದೇ ಈ ಮದುವೆಯನ್ನ ನೆರವೇರಿಸಿಕೊಟ್ಟ ಪಾದ್ರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ.
ಕಳೆದ ವರ್ಷ ನವೆಂಬರ್ 9ರಂದು ಸೇಂಟ್ ಜೋಸೆಫ್ ಚರ್ಚ್ನಲ್ಲಿ ಕೊಚ್ಚಿಯ ಮುಸ್ಲಿಂ ವ್ಯಕ್ತಿ ಹಾಗೂ ಇರಿಂಜಲಕುಡಾದ ಕ್ಯಾಥೋಲಿಕ್ ಮಹಿಳೆ ನಡುವೆ ವಿವಾಹ ನೆರವೇರಿತ್ತು. ಈ ಮದುವೆಗೆ ಮಧ್ಯಪ್ರದೇಶದ ಬಿಷಪ್ ಮ್ಯಾಥ್ಯೂ ವನಿಯಾಕಿಝಕ್ಕೆಲ್ ಭಾಗಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದ ಬಳಿಕ ಈ ವಿವಾಹ ಸಮಾರಂಭ ಮೊದಲ ಬಾರಿಗೆ ವಿವಾದಕ್ಕೆ ಈಡಾಗಿತ್ತು. ಬಿಷಪ್ಗಳು ಅಂತರ್ ಧರ್ಮೀಯ ವಿವಾಹ ಸಮಾರಂಭಗಳಲ್ಲಿ ಭಾಗಿಯಾಗುವಂತಿಲ್ಲ.
ಲವ್ ಜಿಹಾದ್ ವಿರುದ್ಧ ಹೋರಾಟ ಜೋರಾಗಿರುವ ಬೆನ್ನಲ್ಲೇ ಈ ಮದುವೆಗೆ ಬಿಷಪ್ ಪಾಲ್ಗೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಪತ್ರಿಕೆಗಳಲ್ಲೂ ಈ ಮದುವೆ ಸಮಾರಂಭ ಭಾರೀ ಸದ್ದು ಮಾಡಿತ್ತು. ವಧುವಿನ ಕುಟುಂಬಸ್ಥರ ಜೊತೆ ನಿಕಟ ಸಂಬಂಧ ಹೊಂದಿದ್ದಕ್ಕೆ ಬಿಷಪ್ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂಬ ಕ್ಷಮಾಪಣಾ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಇದಾದ ಬಳಿಕ ಅಂತರ್ಧರ್ಮೀಯ ವಿವಾಹದ ಬಗ್ಗೆ ತನಿಖೆ ನಡೆಸಲು ಸಿರೋ ಮಲಬಾರ್ ಚರ್ಚ್ ಆರ್ಚ್ ಬಿಷಪ್ ಮಾರ್ ಜಾರ್ಜ್ ಅಲೆನ್ಚೆರಿ ಆದೇಶ ಹೊರಡಿಸಿದ್ದರು. ಇದೀಗ ಮೂವರು ಸದಸ್ಯರ ವಿಚಾರಣಾ ಆಯೋಗ ಈ ಆದೇಶ ಹೊರಡಿಸಿದೆ. ಮಾತ್ರವಲ್ಲದೇ ಮದುವೆ ಮಾನ್ಯ ಮಾಡಲು ಕೆಲ ಸಲಹೆಗಳನ್ನೂ ನೀಡಿದೆ.