ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್ ಮಾಕ್ ಡ್ರಿಲ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ ಆಮ್ಲಜನಕ ಕಡಿತಗೊಳಿಸಿದ ಪರಿಣಾಮವಾಗಿ ಬರೋಬ್ಬರಿ 22 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗಿದೆ.
ಆಕ್ಸಿಜನ್ ಮಾಕ್ ಡ್ರಿಲ್ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ..? ಈ ರೀತಿಯ ಚಟುವಟಿಕೆಯಿಂದ ವೈದ್ಯಕೀಯ ಆಮ್ಲಜನಕವಿಲ್ಲದೇ ರೋಗಿ ಬದುಕುಳಿಯಬಹುದೇ ಎಂದು ಪರೀಕ್ಷೆ ಮಾಡುವ ಸಲುವಾಗಿ ಮಾಡಿದ ಪ್ರಯತ್ನ ಇದಾಗಿತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನ ಆಸ್ಪತ್ರೆ ಮಾಲೀಕ ಈ ವಿಡಿಯೋದಲ್ಲಿ ಹೇಳಿದ್ದಾನೆ.
ಈ ವಿವಾದಾತ್ಮಕ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ.ಎನ್. ಸಿಂಗ್ ಹಾಗೂ ಸಿಎಂಓ ಆರ್.ಸಿ ಪಾಂಡೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಈ ಆಸ್ಪತ್ರೆಯಲ್ಲಿ 22 ಮಂದಿ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಅವರ ಸಾವಿನ ಬಗ್ಗೆ ಆಸ್ಪತ್ರೆಯಿಂದ ಇನ್ನೂ ಯಾವುದೇ ನಿಖರ ವಿವರಣೆಗಳು ಹೊರಬಿದ್ದಿಲ್ಲ ಎಂದು ಪಿ.ಎನ್. ಸಿಂಗ್ ಹೇಳಿದ್ದಾರೆ.