ಫರೀದಾಬಾದ್: ನವದೆಹಲಿಯಲ್ಲಿ ಬಾಬಾ ಒಬ್ಬ ಡಾಬಾದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕತೆ ಕೇಳಿ ನೆಟ್ಟಿಗರು ಅವರ ಬೆಂಬಲಕ್ಕೆ ಬಂದಿದ್ದರು. ಆ ಯಶಸ್ಸಿನ ಬಳಿಕ ಈಗ ಜಾಲತಾಣದಲ್ಲಿ ಅಂಥ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಬೇಲ್ ಪುರಿವಾಲಾನ ಕರುಣಾಜನಕ ಕತೆ ಗಮನ ಸೆಳೆದಿದೆ.
ಫರೀದಾಬಾದ್ ನಲ್ಲಿ ಬೇಲ್ ಪುರಿ ಮಾರುತ್ತಿರುವ ಚಂಗಾ ಲಾಲ್ ಬಾಬಾ ಎಂಬ 86 ವರ್ಷದ ವೃದ್ಧನ ಕತೆಯನ್ನು ವಿಶಾಲ ಚೌಬೆ ಎಂಬುವವರು ಮೊದಲು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಂಗಾ ಬಾಬಾ ಅವರಿಗೆ ಪತ್ನಿ ಇಲ್ಲ. ಹಿರಿಯ ಮಗ ಮೃತಪಟ್ಟಿದ್ದಾನೆ. ಎರಡನೇ ಮಗ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದಾನೆ. ಒಬ್ಬ ಸೊಸೆಗೆ ನಾಲ್ವರು ಮಕ್ಕಳಿದ್ದಾರೆ. ಆಕೆಯೂ ಕೆಲಸ ಮಾಡುತ್ತಿದ್ದು, ಮಾವ ಹಾಗೂ ಸೊಸೆ ಸೇರಿ ತಿಂಗಳಿಗೆ 6 ಸಾವಿರ ದುಡಿಯುತ್ತಾರೆ.
ಕುಟುಂಬ ಸಾಕಲು ಬಾಬಾ ಇಡೀ ದಿನ ಕಷ್ಟಪಡುತ್ತಿದ್ದಾರೆ. ಕರೊನಾದಲ್ಲಿ 60 ವರ್ಷ ಮೇಲ್ಪಟ್ಟವರು ಓಡಾಡಬಾರದು ಎಂಬ ನಿಯಮವಿದೆ. ಆದರೆ, ಚಂಗಾ ಅವರು ಜೀವನ ನಡೆಸುವ ಸಲುವಾಗಿ ತಮ್ಮ ಬೇಲ್ ಪುರಿ ಗಾಡಿ ನಡೆಸಲೇ ಬೇಕಿದೆ. ಅವರಿಗೆ ಎಲ್ಲರ ಸಹಕಾರ ಬೇಕಿದೆ. ಎಂದು ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.