ಮುಂದಿನ ತಿಂಗಳು 50 ತೃಣಮೂಲ ಶಾಸಕರು ವಿರೋಧ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ ಬೆನ್ನಲ್ಲೇ ಸಚಿವ ಜ್ಯೋತಿ ಪ್ರಿಯ ಮಲ್ಲಿಕ್ ಮೇ ತಿಂಗಳಲ್ಲಿ ಆರರಿಂದ ಏಳು ಬಿಜೆಪಿ ಸಂಸದರು ತೃಣ ಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು.
ಈ ಎಲ್ಲ ಏರಿಳಿತಗಳ ನಡುವೆ ಟಿಎಂಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸದೆ ಶತಾಬ್ದಿ ರಾಯ್ , ಶನಿವಾರ ತಮ್ಮ ರಾಜಕೀಯ ಭವಿಷ್ಯ ಕುರಿತಂತೆ ಮಹತ್ವದ ಮಾಹಿತಿ ನೀಡೋದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಶತಾಬ್ದಿ ರಾಯ್ ಫ್ಯಾನ್ಸ್ ಕ್ಲಬ್ ಅಪ್ಲೋಡ್ ಮಾಡಿದ ಫೇಸ್ಬುಕ್ ಪೋಸ್ಟ್ನಲ್ಲಿ, ಇತ್ತೀಚಿನ ದಿನಗಳಲ್ಲಿ ನಾನು ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿರೋದ್ರ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಜನರನ್ನ ತಲುಪಲು ಯತ್ನಿಸುತ್ತಿದ್ದೇನೆ. ಆದರೆ ನಾನು ಜನರ ಬಳಿ ತಲುಪಬಾರದು ಎಂಬ ಕಾರಣಕ್ಕೇ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡಲಾಗುತ್ತಿಲ್ಲ. ಆದ್ದರಿಂದ ಈ ಹೊಸ ವರ್ಷದಲ್ಲಿ ನಾನು ಜನರೊಂದಿಗೆ ಸಂಪೂರ್ಣವಾಗಿ ಇರಲು ಬಯಸುತ್ತೇನೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಬರೆಯಲಾಗಿದೆ.