ಕೊರೊನಾದಿಂದ ಮನುಷ್ಯನ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡಲು ಕೊಲ್ಕತ್ತಾದ 93 ವರ್ಷದ ವೃದ್ಧೆ ಜ್ಯೋತ್ಸ್ಬಾ ಬೋಸ್ ಮೃತ ದೇಹವನ್ನ ದಾನ ಮಾಡಲಾಗಿದೆ. ಈ ಮೂಲಕ ಕೋವಿಡ್ ಅಧ್ಯಯನಕ್ಕಾಗಿ ದೇಹ ದಾನ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಜ್ಯೋತ್ಸ್ನಾಗೆ ದಕ್ಕಿದೆ.
ಜ್ಯೋತ್ಸ್ನಾ ಈ ಸಾಧನೆ ಮಾಡಿದ ಮೊದಲ ಮಹಿಳೆಯಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಎರಡನೆ ನಾಗರಿಕರಾಗಿದ್ದಾರೆ. ಪಶ್ಚಿಮ ಬಂಗಾಳದ ಗಂಧಾರ್ಪಣ ಸಂಸ್ಥೆಯ ಸ್ಥಾಪಕ ಬ್ರೋಜೊ ರಾಯ್ ಮೊದಲು ತಮ್ಮ ಮೃತದೇಹ ದಾನ ಮಾಡಿದ್ದಾರೆ. ಜ್ಯೋತ್ಸ್ನಾ ಬಳಿಕ ತಮ್ಮ ಮೃತ ದೇಹವನ್ನ ಕೋವಿಡ್ ಕುರಿತ ಅಧ್ಯಯನಕ್ಕಾಗಿ ದಾನ ಮಾಡಿದ್ದಾರೆ.
ಕೋವಿಡ್ ಸೋಂಕು ಉಲ್ಬಣ ಹಿನ್ನೆಲೆ ಜ್ಯೋತ್ಸ್ನಾ ಮೇ 14ರಂದು ಉತ್ತರ ಕೊಲ್ಕತ್ತಾ ಭಾಗದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದರು.
ನನ್ನ ಅಜ್ಜಿಯ ಶವ ಪರೀಕ್ಷೆಯನ್ನ ಆರ್.ಜಿ ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆಸಲಾಯ್ತು. ಕೊರೊನಾದಿಂದ ಸಾವನ್ನಪ್ಪಿದ ಬಳಿಕ ರೋಗದ ಕುರಿತ ಅಧ್ಯಯನಕ್ಕಾಗಿ ಶವ ದಾನ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿಗೆ ನನ್ನ ಅಜ್ಜಿ ಪಾತ್ರರಾಗಿದ್ದಾರೆ ಎಂದು ಅವರ ಮೊಮ್ಮಗಳು ಡಾ. ತಿಸ್ತಾ ಬಸು ಹೇಳಿದ್ದಾರೆ.