74 ಚಕ್ರಗಳನ್ನು ಹೊಂದಿದ್ದ ಬೃಹತ್ ಲಾರಿಯೊಂದು ಬರೋಬ್ಬರಿ 70 ಟನ್ ತೂಕದ ಯಂತ್ರೋಪಕರಣಗಳನ್ನು ಹೊತ್ತು 1700 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಹತ್ತು ತಿಂಗಳ ಅವಧಿಯನ್ನು ತೆಗೆದುಕೊಂಡಿದೆ.
ಹೌದು, ಈ ಲಾರಿಯಲ್ಲಿ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಬೇಕಾದ ಮಹತ್ವದ ಯಂತ್ರೋಪಕರಣಗಳಿದ್ದು, ಹೀಗಾಗಿ ಅತ್ಯಂತ ಸುರಕ್ಷಿತ ರೀತಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಈ ದೂರವನ್ನು ಕ್ರಮಿಸಿದೆ.
2019ರ ಸೆಪ್ಟೆಂಬರ್ 1ರಂದು ನಾಸಿಕ್ ನಿಂದ ಈ ಲಾರಿ ಪ್ರಯಾಣ ಆರಂಭಿಸಿದ್ದು, ನಗರ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಸ್ತೆಯಲ್ಲಿ ಒಂದೇ ಒಂದು ಗುಂಡಿ ಇಲ್ಲದಂತೆ ನೋಡಿಕೊಳ್ಳಲಾಗಿದ್ದು, ಅಲ್ಲದೆ ಯಾವುದೇ ಅಡ್ಡಿಯಾಗದಂತೆ ರಸ್ತೆ ಅಕ್ಕಪಕ್ಕದ ಮರದ ಟೊಂಗೆಗಳನ್ನು ಕತ್ತರಿಸಲಾಗಿತ್ತು.
ಈ ಲಾರಿ ಸಂಚಾರ ನಿಗದಿತ ಅವಧಿಗಿಂತ ಮೂರು ತಿಂಗಳ ವಿಳಂಬಗೊಂಡಿದ್ದು, ಲಾಕ್ ಡೌನ್ ಹೇರಿಕೆ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಇದೀಗ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ಸುರಕ್ಷಿತವಾಗಿ ತಿರುವನಂತಪುರಕ್ಕೆ ತಲುಪಿವೆ.