ಭಾರತ್ ಬಯೋಟೆಕ್ನ ಕೋವಿಡ್ 19 ಲಸಿಕೆ ಕೋವ್ಯಾಕ್ಸಿನ್ 320 ಡೋಸ್ಗಳನ್ನ ಕಳವು ಮಾಡಿದ ಘಟನೆ ಜೈಪುರದ ಆಸ್ಪತ್ರೆಯಲ್ಲಿ ನಡೆದಿದೆ.
ಕೋಲ್ಡ್ ಸ್ಟೋರೇಜ್ನಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಯನ್ನ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
1 ಬಾಟಲಿ ಕೋವ್ಯಾಕ್ಸಿನ್ನಲ್ಲಿ 10 ಡೋಸ್ಗಳು ಇರುತ್ತವೆ. ಇಂತಹ 32 ಬಾಟಲಿಗಳು ಅಂದರೆ 320 ಡೋಸ್ಗಳು ಕಣ್ಮರೆಯಾಗಿವೆ. ಜೈಪುರದ ಶಾಸ್ತ್ರಿ ನಗರದ ಕನ್ವತಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆಯ ಸೂಪರಿಟೆಂಡೆಂಟ್ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿದ ಮೆಡಿಕಲ್ ಆಫೀಸರ್, ಆಸ್ಪತ್ರೆಯಿಂದ 320 ಡೋಸ್ ಕೊರೊನಾ ಲಸಿಕೆಗಳು ಕಣ್ಮರೆಯಾಗಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹೇಳಿದ್ರು.
ಕಳೆದ ವಾರವಷ್ಟೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರಾಜ್ಯದಲ್ಲಿ ಲಸಿಕೆಯ ಅಭಾವದ ಬಗ್ಗೆ ಧ್ವನಿ ಎತ್ತಿದ್ದರು. ರಾಜಸ್ಥಾನದಲ್ಲಿ ಕೊರೊನಾ ಲಸಿಕೆ ಡ್ರೈವ್ ಮುಂದುವರಿಸಲು ಸಾಕಾಗುವಷ್ಟು ಲಸಿಕೆ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಸಿಕೆ ಡ್ರೈವ್ ನಿಲ್ಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದರು.