ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ 24 ವರ್ಷದ ಹಿಂದಿನ ಕೇಸ್ನಿಂದ ಮುಕ್ತಿ ಪಡೆದಿದ್ದಾರೆ. 24 ವರ್ಷಗಳ ಹಿಂದೆ ಅಂದಿನ ಶಿವ ಉದ್ಯೋಗ್ ಸೇನೆಯ ಮುಖ್ಯಸ್ಥರಾಗಿದ್ದ ರಾಜ್ ಠಾಕ್ರೆ ಮೈಕಲ್ ಜಾಕ್ಸನ್ರನ್ನ ಮಹಾರಾಷ್ಟ್ರಕ್ಕೆ ಕರೆಯಿಸಿ ಕಾನ್ಸರ್ಟ್ ಒಂದನ್ನ ಆಯೋಜಿಸಿದ್ದರು.
ಈ ಕಾರ್ಯಕ್ರಮದ ತೆರಿಗೆ ವಿಚಾರವಾಗಿ ನಡೆಯುತ್ತಿದ್ದ ಕೇಸ್ 24 ವರ್ಷಗಳ ಬಳಿಕ ಮುಕ್ತಾಯಗೊಂಡಿದೆ. 1996ರಲ್ಲಿ ಅಂದಿನ ಶಿವಸೇನಾ ಸರ್ಕಾರ ಈ ಕಾರ್ಯಕ್ರಮಕ್ಕೆ ತೆರಿಗೆ ವಿನಾಯಿತಿ ನೀಡಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ ಹೇರಿತ್ತು.
ಇದೀಗ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ 24 ವರ್ಷದ ಹಿಂದಿನ ಕೇಸ್ ಕೈಗೆತ್ತಿಕೊಂಡಿರುವ ಮಹಾರಾಷ್ಟ್ರ ಸರ್ಕಾರ 1996ರಲ್ಲಿ ಮುಂಬೈನಲ್ಲಿ ನಡೆದ ಸಂಗೀತ ಕಚೇರಿಗೆ ಮಂಜೂರು ಮಾಡಲಾಗಿದ್ದ ತೆರಿಗೆ ವಿನಾಯಿತಿಯನ್ನ ಪುನರ್ ಸ್ಥಾಪಿಸಲು ನಿರ್ಧರಿಸಿದೆ.
ಇದರಿಂದಾಗಿ ಕಾರ್ಯಕ್ರಮದ ಆಯೋಜಕರಾದ ವಿಜ್ಕ್ರಾಫ್ಟ್ ಇಂಟರ್ನ್ಯಾಷನಲ್ಗೆ 3 ಕೋಟಿ 36 ಲಕ್ಷ ರೂಪಾಯಿ ವಾಪಾಸ್ ಸಿಗಲಿದೆ. ಈ ಹಣವನ್ನ ಕೋರ್ಟ್ ಆದೇಶದ ಬಳಿಕ ಈ ಹಿಂದೆ ಅದಾಲತ್ನ ಖಜಾನೆಗೆ ಆಯೋಜಕರು ಪಾವತಿಸಿದ್ದರು.