ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ ಅತ್ಯಂತ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜೊತೆ ಕೆಲಸ ಮಾಡಿದ್ದರು. 1918ರಲ್ಲಿ ವಿಶ್ವಕ್ಕೆ ಸ್ಪ್ಯಾನಿಶ್ ಫ್ಲೂ ಆವರಿಸಿದ್ದ ವೇಳೆ ಕೇವಲ್ ಕೃಷ್ಣರಿಗೆ ಕೇವಲ 5 ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಕೃಷ್ಣ ಮಾಹಿತಿ ನೀಡಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ಅನಿಲ್ ಕೃಷ್ಣ, ಮಾರ್ಚ್ 2020ರಲ್ಲಿ ಲಾಕ್ಡೌನ್ ಆದೇಶ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇವಲ್ ಕೃಷ್ಣ ಲಸಿಕೆಯ ಕಾರಣಕ್ಕಾಗಿ ಮನೆಯಿಂದ ಹೊರ ಬಂದಿದ್ದಾರೆ. ಲಾಕ್ಡೌನ್ ಜಾರಿಯಾದಾಗಿನಿಂದ ನಾವು ಅವರನ್ನ ಮನೆಯಲ್ಲೇ ಸುರಕ್ಷಿತವಾಗಿ ಇರಿಸಿದ್ದೆವು. ಇಂದು ಕೊರೊನಾ ಲಸಿಕೆಗಾಗಿ ಅವರು ಬಂದಿದ್ದಾರೆ ಎಂದು ಹೇಳಿದ್ರು. ಲಸಿಕೆ ಸ್ವೀಕರಿಸಿದ ಬಳಿಕ ಕೇವಲ್ ಕೃಷ್ಣರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಮನೆಗೆ ತೆರಳಿದ ಕೇವಲ್ ಕೃಷ್ಣ ಪೂಜಾ ಕಾರ್ಯಗಳನ್ನ ನೆರವೇರಿಸಿದ್ದಾರೆ.