ಕೊರೊನಾ ಕಾಲದಿಂದಾಗಿ ಶಾಲೆಗಳು ಕಳೆದೊಂದು ವರ್ಷದಿಂದ ಭಾಗಶಃ ಬಂದ್ ಆಗಿದೆ. ಕೆಲ ಮಕ್ಕಳು ಆನ್ಲೈನ್ ಶಿಕ್ಷಣದ ಮೂಲಕ ವ್ಯಾಸಂಗ ಮಾಡುತ್ತಿದ್ದರೆ ಇನ್ನು ಕೆಲ ಬಡ ಮಕ್ಕಳ ಪಾಡು ಮೂರಾಬಟ್ಟೆಯಾಗಿದೆ. ಇದೇ ಕಾರಣಕ್ಕೆ 10 ವರ್ಷದ ಬಾಲಕ ವಂಶ್ ಸಿಂಗ್ ಇಂಟರ್ನೆಟ್ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾನೆ.
ಶಾಲೆಯನ್ನ ಬಿಟ್ಟಿರುವ ಈ ಬಾಲಕ ಪಂಜಾಬ್ನ ಲುಧಿಯಾನದ ರಸ್ತೆ ಬದಿಯಲ್ಲಿ ಸಾಕ್ಸ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾನೆ.
ಕಡುಬಡತನದ ಕುಟುಂಬದಲ್ಲಿ ಜನಿಸಿರುವ ವಂಶ್ ಕುಟುಂಬ ನಿರ್ವಹಣೆಗಾಗಿ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ದುಡಿಯುವಂತಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿ ಕನಿಕರದಿಂದ 50 ರೂಪಾಯಿ ಹೆಚ್ಚಿನ ಹಣವನ್ನ ನೀಡಲು ಹೋದರೂ ಸಹ ಬಾಲಕ ಅದನ್ನ ನಿರಾಕರಿಸಿದ್ದಾನೆ. ಈ ವಿಡಿಯೋ ಟ್ವಿಟರ್ನಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದರೆ ಸ್ವತಃ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಅಲ್ಲದೇ ತಮ್ಮ ಟ್ವಿಟರ್ ಪೇಜ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಅಲ್ಲದೇ ಬಾಲಕನನ್ನ ಸಂಪರ್ಕ ಮಾಡಿ ಆತನ ಜೊತೆ ಮಾತನ್ನೂ ಆಡಿದ್ದಾರೆ.
ಬಾಲಕ ವಂಶ್ ಸಿಂಗ್ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ. ಲುಧಿಯಾನದ ರಸ್ತೆಯಲ್ಲಿ 2ನೇ ತರಗತಿಗೇ ವ್ಯಾಸಂಗ ನಿಲ್ಲಿಸಿದ ಬಾಲಕ ಸಾಕ್ಸ್ ಮಾರಾಟ ಮಾಡ್ತಿರೋದನ್ನ ವಿಡಿಯೋ ಮೂಲಕ ಗಮನಿಸಿದ್ದೇನೆ. ಜಿಲ್ಲಾಧಿಕಾರಿಗಳ ಬಳಿ ಈತ ಶಾಲೆಗೆ ಮರುಸೇರ್ಪಡೆಯಾಗೋದನ್ನ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದೇನೆ. ಅಲ್ಲದೇ ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿ ತುರ್ತು ಪರಿಹಾರ ಘೋಷಣೆ ಮಾಡಿದ್ದೇನೆ ಎಂದು ಅಮರಿಂದರ್ ಸಿಂಗ್ ಟ್ವೀಟಾಯಿಸಿದ್ದಾರೆ.
ಸಿಎಂ ಅಮರಿಂದರ್ ಸಿಂಗ್ ಟ್ವೀಟ್ನ್ನು ಅನೇಕರು ಶೇರ್ ಮಾಡಿದ್ದಾರೆ. ಹಾಗೂ ಅಮರೀಂದರ್ ಸಿಂಗ್ ಮಾನವೀಯತೆಗೆ ನೆಟ್ಟಿಗರು ತಲೆಬಾಗಿದ್ದಾರೆ.