ಶಿಶುವಿಗೆ ತಾಯಿಯ ಎದೆ ಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲ, ತಾಯಿ ಹಾಲೇ ಶ್ರೇಷ್ಠ ಅನ್ನೋದು ಗೊತ್ತಿರುವ ವಿಚಾರ. ಹಾಲಿನಲ್ಲಿ ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ ಜೊತೆಗೆ ತಾಯಿಯ ಮಮತೆಯೂ ಇರುತ್ತದೆ. ಆದರೆ ಕೆಲವೊಂದು ಮಕ್ಕಳಿಗೆ ತಾಯಿ ಹಾಲೇ ಸಿಗೋದಿಲ್ಲ. ಇಂತಹ ಮಕ್ಕಳ ನೆರವಿಗೆ ಧಾವಿಸಿದ್ದಾರೆ ಇಲ್ಲೊಬ್ಬರು ನಿರ್ಮಾಪಕಿ.
ಹೌದು, ʼಸಾಂಡ್ ಕೀ ಆಂಖ್ʼ ಚಿತ್ರದ ನಿರ್ಮಾಪಕಿ ನಿಧಿ ಪಾರ್ಮಾರ್ ಹೀರಾನಂದಾನಿ ಸುಮಾರು 42 ಲೀಟರ್ ಎದೆ ಹಾಲನ್ನು ದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಷ್ಟು ಹಾಲನ್ನು ದಾನವಾಗಿ ಕೊಡೊದು ಅಂದರೆ ಸುಮ್ಮನೆ ಮಾತಲ್ಲ. ಆದರೆ ಈ ನಿರ್ಮಾಪಕಿ ತನ್ನ ಮಗುವಿಗೂ ಹಾಲುಣಿಸಿ ಅದರ ಜೊತೆಗೆ ತಾಯಿ ಹಾಲಿನಿಂದ ವಂಚಿತರಾಗಿದ್ದ ನವಜಾತ ಶಿಶುಗಳಿಗೂ ಹಾಲುಣಿಸಿದ್ದಾರೆ.
ಇದೇ ವರ್ಷದಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು ನಿಧಿ. ತಮ್ಮ ಮಗುವಿಗೆ ಬೇಕಾದಷ್ಟು ಹಾಲು ಕುಡಿಸಿದ ನಂತರವೂ ಹಾಲು ಉಳಿಯುತ್ತಿದೆ ಎಂದು ಅವರಿಗೆ ಅರಿವಿಗೆ ಬಂದಿದೆ. ಆಗ ಅವರು ಈ ಹಾಲನ್ನು ಶೇಖರಿಸಿ ತಾಯಿ ಹಾಲಿನಿಂದ ವಂಚಿತರಾದ ಮಕ್ಕಳಿಗೆ ನೀಡಬಹುದು ಎಂದು ಯೋಚಿಸಿದ್ದಾರೆ. ತಕ್ಷಣವೇ ಬಾಂದ್ರಾದ ಸ್ತ್ರೀರೋಗ ತಜ್ಞರನ್ನು ಸಂಪರ್ಕ ಮಾಡಿ ಅವರಿಂದ ಸಲಹೆ ಪಡೆದು ಆಸ್ಪತ್ರೆಯೊಂದಕ್ಕೆ ಹಾಲು ದಾನ ಮಾಡಿದ್ದಾರೆ. ಇದರ ಜೊತೆಗೆ ಮತ್ತೊಂದು ನಿರ್ಧಾರ ಮಾಡಿರುವ ನಿಧಿ, ಮುಂದಿನ ಒಂದು ವರ್ಷದವರೆಗೂ ಇದೇ ರೀತಿಯಲ್ಲಿ ಹಾಲು ದಾನ ಮಾಡುತ್ತಾರಂತೆ.