ತಾಯಿ, ತಂದೆ ಮಕ್ಕಳ ಆರೋಗ್ಯಕ್ಕೆ ಏನು ಬೇಕಾದ್ರೂ ಮಾಡಬಲ್ಲರು. ಇದಕ್ಕೆ ಈ ಘಟನೆ ಸಾಕ್ಷಿ. ಮಗುವಿಗೆ ತಾಯಿ ಹಾಲನ್ನು ಒಂದು ಸಾವಿರ ಕಿಲೋಮೀಟರ್ ದೂರದಿಂದ ಕಳುಹಿಸಲಾಗ್ತಿದೆ. ಘಟನೆ ನಡೆದಿರೋದು ಲಡಾಖ್ ನಲ್ಲಿ.
ಮಗು ಹುಟ್ಟಿದ ನಂತ್ರ ತಾಯಿ ಹಾಲನ್ನು ಹೀರ್ತಿರಲಿಲ್ಲ. ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿದಾಗ ಮಗುವಿಗೆ ಸಮಸ್ಯೆಯಿರುವು ಗೊತ್ತಾಗಿದೆ. ಮಗುವಿನ ಮಾವ ನವಜಾತ ಶಿಶುವನ್ನು ದೆಹಲಿಯ ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆತಂದ್ರು. ಅಲ್ಲಿ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ.
ಮಗುವಿಗೆ ಪ್ರತಿ ದಿನ ತಾಯಿ ತನ್ನ ಎದೆ ಹಾಲನ್ನು ಕಳುಹಿಸುತ್ತಿದ್ದಾಳೆ. ದೆಹಲಿಯಿಂದ ಸುಮಾರು ಸಾವಿರ ಕಿಲೋಮೀಟರ್ ದೂರದಲ್ಲಿರುವ ಲಡಾಖ್ ನಿಂದ ಎದೆ ಹಾಲನ್ನು ಮಗುವಿಗೆ ಕಳುಹಿಸುತ್ತಿದ್ದಾಳೆ. ಸರಕು ವಿಮಾನದ ಮೂಲಕ ದೆಹಲಿಯಲ್ಲಿರುವ ಮಗುವಿಗೆ ತಾಯಿ ಎದೆ ಹಾಲನ್ನು ಕಳೆದ ಒಂದು ತಿಂಗಳಿಂದ ತಲುಪಿಸುತ್ತಿದ್ದಾರೆ.
ಹಾಲಿನ ಪುಡಿಯನ್ನು ಮಗು ಸೇವಿಸದ ಕಾರಣ ಹೀಗೆ ಮಾಡಲಾಗ್ತಿದೆ. ಮಗು ಈಗ ಚೇತರಿಸಿಕೊಳ್ತಿದೆ ಎಂದು ಮಗುವಿನ ತಂದೆ ಜಿಕ್ಮೆಟ್ ವಾಂಗ್ಡು ಹೇಳಿದ್ದಾರೆ. ಲಡಾಖ್ ವಿಮಾನ ನಿಲ್ದಾಣದಿಂದ ಬರುವ ಹಾಲನ್ನು ಮಗುವಿನ ಮಾವ ಕಲೆಕ್ಟ್ ಮಾಡ್ತಾರೆ.