ಕೊರೊನಾ ಸೋಂಕು ತಡೆಗೆ ಅಗತ್ಯ ಸಾಧನ ಸಲಕರಣೆ ಹೊಂದುವ ಸಲುವಾಗಿ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ಪರಿಹಾರ’ (ಪಿಎಂ ಕೇರ್ಸ್) ನಿಧಿಯನ್ನು ಸ್ಥಾಪಿಸಿತ್ತು.
ಪ್ರಧಾನಿಯವರು ಪಿಎಂ ಕೇರ್ಸ್ ನಿಧಿಗೆ ಪದನಿಮಿತ್ತ ಅಧ್ಯಕ್ಷರಾಗಿದ್ದು, ರಕ್ಷಣಾ ಮತ್ತು ಗೃಹ ಸಚಿವರು ಟ್ರಸ್ಟಿಗಳಾಗಿದ್ದಾರೆ. ಈ ನಿಧಿ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ಅಪಸ್ವರ ತೆಗೆಯುತ್ತಲೇ ಬಂದಿದ್ದವು. ಜೊತೆಗೆ ಈ ಹಣವನ್ನು ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಿಎಂ ಕೇರ್ಸ್ ಹಣವನ್ನು ಎನ್.ಡಿ.ಆರ್.ಎಫ್.ಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ಮಧ್ಯೆ ಸರ್ಕಾರ ಪಿಎಂ ಕೇರ್ಸ್ ನಿಧಿಗೆ ಇದುವರೆಗೆ ಸಂಗ್ರಹವಾಗಿರುವ ಹಣದ ಮಾಹಿತಿ ನೀಡಿದ್ದು, ಒಟ್ಟು 3500 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹೇಳಿದೆ. ಈ ಪೈಕಿ 2000 ಕೋಟಿ ರೂ. ವೆಚ್ಚದಲ್ಲಿ 50,000 ವೆಂಟಿಲೇಟರ್ ಗಳನ್ನು ಖರೀದಿಸಲಾಗಿದ್ದು, ನೂರು ಕೋಟಿ ರೂಪಾಯಿಗಳನ್ನು ಲಸಿಕೆಯ ಸಂಶೋಧನೆಗೆ ನೀಡಲಾಗಿದೆ. ಅಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರ ನೆರವಿಗಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿಸಲಾಗಿದೆ ಎಂದು ತಿಳಿಸಲಾಗಿದೆ.