![Baba Ramdev launches Corona Ayurvedic medicine Coroline Tablet ...](https://hindi.cdn.zeenews.com/hindi/sites/default/files/2020/06/23/581519-baba-ramdev-coronavirus-medicine.jpg)
ಯೋಗ ಗುರು ಬಾಬಾ ರಾಮ್ ದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ, ಮಹಾಮಾರಿ ಕೊರೊನಾಗೆ ‘ಕರೊನಿಲ್’ ಎಂಬ ಔಷಧಿ ತಯಾರಿಸಿರುವ ಕುರಿತು ತಿಳಿಸಿದ್ದಲ್ಲದೆ ಆಯುಷ್ ಇಲಾಖೆಯಿಂದ ಒಪ್ಪಿಗೆ ಸಿಗುವ ಮುನ್ನವೇ ಜಾಹೀರಾತು ನೀಡಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.
ಹೀಗಾಗಿ ಆಯುಷ್ಯ ಇಲಾಖೆ, ಪತಂಜಲಿ ಸಂಸ್ಥೆಗೆ ನೋಟಿಸ್ ನೀಡಿ ಜಾಹೀರಾತು ಪ್ರಕಟಿಸದಂತೆ ಸೂಚಿಸಿತ್ತಲ್ಲದೆ ಕ್ಲಿನಿಕಲ್ ಟ್ರಯಲ್ ವರದಿಯನ್ನು ಸಲ್ಲಿಸುವಂತೆ ಹೇಳಿತ್ತು. ಇದರ ಮಧ್ಯೆ ಯೋಗಗುರು ಬಾಬಾ ರಾಮ್ ದೇವ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಕೊರೊನಾ ಔಷಧ ಕರೊನಿಲ್ ಕುರಿತು ಯಾವುದೇ ಗೊಂದಲ ಬೇಡ ಎಂದು ತಿಳಿಸಿರುವ ಬಾಬಾ ರಾಮ್ ದೇವ್, ಇದರ ತಯಾರಿಕೆಗೆ ಆಯುರ್ವೇದಿಕ್ ಔಷಧ ಗುಣಗಳುಳ್ಳ ಸಾಮಾಗ್ರಿಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಅಶ್ವಗಂಧ, ತುಳಸಿ ಹಾಗೂ ಇನ್ನಿತರ ವಸ್ತುಗಳಿಂದ ತಯಾರಾಗಿರುವ ಈ ಔಷಧಿಯನ್ನು ಸಾಂಪ್ರದಾಯಿಕ ಮತ್ತು ಅನುಭವದ ಆಧಾರದ ಮೇಲೆ ಪರವಾನಿಗೆ ನೀಡಲಾಗಿದ್ದು, ಇದೀಗ ಸರ್ಕಾರಕ್ಕೆ ಕ್ಲಿನಿಕಲ್ ಟ್ರಯಲ್ ವರದಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿರುವ ಯೋಗ ಗುರು, ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.