ಚೆನ್ನೈ: ಖ್ಯಾತ ಗಾಯಕ, ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಕೆಲ ಹೊತ್ತಲ್ಲೇ ಎಂಜಿಎಂ ಆಸ್ಪತ್ರೆಯಿಂದ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಗಾಯಕನ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೆ.5ರಂದು ವೈದ್ಯರ ಸಲಹೆ ಮೇರೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ತೊಂದರೆ ಹಾಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಗುಣಮುಖರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೂ ನುರಿತ ವೈದ್ಯರಿಂದ ಚಿಕಿತ್ಸೆ ಮುಂದುವರೆದಿತ್ತು. ಆದರೆ ಎಂ ಜಿ ಎಂ ಆಸ್ಪತ್ರೆ ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಎಸ್ ಪಿ ಬಿ ಆರೋಗ್ಯ ಚಿಂತಜನಕವಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಎಂ ಜಿ ಎಂ ಆಸ್ಪತ್ರೆ ಸುತ್ತ ಬಿಗಿ ಭದ್ರತೆ ಹೆಚ್ಚಿಸಲಾಗುತ್ತಿದ್ದು, ಎಸ್ ಪಿ ಬಿ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಈಗಾಗಲೇ ಎಂಜಿಎಂ ಆಸ್ಪತ್ರೆಗೆ ಎಸ್ ಪಿ ಬಿ ಕುಟುಂಬಸ್ಥರು, ಖ್ಯಾತ ನಟರು ಹಾಗೂ ತಮಿಳುನಾಡು ಸರ್ಕಾರದ ಕೆಲ ಸಚಿವರು ದೌಡಾಯಿಸಿ ವೈದ್ಯರಿಂದ ಎಸ್ ಪಿ ಬಿ ಆರೋಗ್ಯದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅಭಿಮಾನಿಗಳು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.