ನವದೆಹಲಿ: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ನೇಪಾಳ, ಬಾಂಗ್ಲಾದೇಶ ಸೇರಿದಂತೆ ಆರು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಸರಬರಾಜು ಮಾಡುವುದಾಗಿ ಭಾರತ ಪ್ರಕಟಿಸಿದೆ.
ಜನವರಿ 20 ರ ಬುಧವಾರದಿಂದ ಭೂತಾನ್, ಮಾಲ್ಡಿವ್ಸ್, ಬಾಂಗ್ಲಾದೇಶ, ನೇಪಾಳ, ಸೀಶೆಲ್ಸ್ ದೇಶಗಳಿಗೆ ಅನುದಾನದ ನೆರವಿನ ಅಡಿಯಲ್ಲಿ ಕೋವಿಡ್-19 ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಭಾರತ ಮಂಗಳವಾರ ಪ್ರಕಟಿಸಿದೆ.
ನೆರೆಯ ಮತ್ತು ಪ್ರಮುಖ ಪಾಲುದಾರ ದೇಶಗಳಿಗೆ ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಹಲವಾರು ಮನವಿಗಳು ಬಂದಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮನವಿಗಳಿಗೆ ಪೂರಕವಾಗಿ ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣೆ ಸಾಮರ್ಥ್ಯವನ್ನು ಪರಿಗಣಿಸಿ ಮಾನವೀಯತೆಯ ಆಧಾರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಲಾಗುವುದು. ಭಾರತದ ಘೋಷಿತ ಬದ್ಧತೆಗೆ ಅನುಗುಣವಾಗಿ ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್, ಮಯನ್ಮಾರ್ ಸೀಶೆಲ್ಸ್ ದೇಶಗಳಿಗೆ ಲಸಿಕೆ ಸರಬರಾಜು ಮಾಡಲಾಗುವುದು. ಆಫ್ಘಾನಿಸ್ತಾನ, ಮಾರಿಷಸ್ ಮತ್ತು ಶ್ರೀಲಂಕಾ ದೇಶಗಳಿಗೆ ಅಗತ್ಯವಾದ ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಭಾರತದಲ್ಲಿ ಈಗಾಗಲೇ ಲಸಿಕೆ ನೀಡಲು ಆರಂಭಿಸಲಾಗಿದ್ದು, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ದೇಶಾದ್ಯಂತ ಲಸಿಕೆ ನೀಡಲಾಗುತ್ತಿದೆ. ಆಕ್ಸ್ಫರ್ಡ್ ಆಸ್ಟ್ರಾಜೆನೆಕಾದ ಕೊವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದ್ದು, ಕೊವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿದೆ. ಇವೆರಡು ಲಸಿಕೆಗಳಿಗೆ ಅನುಮತಿ ದೊರೆತಿದೆ.