ತನ್ನ ಪತಿಯ ಜೀವವನ್ನು ಕಾಪಾಡಲು ಪತ್ನಿಯಾದಾಕೆ ಪ್ರಾಣವನ್ನೂ ಪಣಕ್ಕಿಡುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಅಪೂರ್ವ ಲವ್ ಸ್ಟೋರಿ ಇದು ಕೂಡ. ಎಂಟು ಸಲ ಡಯಾಲಿಸಿಸ್ಗೆ ಒಳಗಾದ ನಂತರ ತನ್ನ ಗಂಡನ ಜೀವ ಉಳಿಸಲು ಹೆಂಡತಿಯೇ ತನ್ನ ಕಿಡ್ನಿ ದಾನ ಮಾಡಿದ್ದಾರೆ.
70 ವರ್ಷದ ಆಸುಪಾಸಿನಲ್ಲಿ ಇರುವ ಈ ದಂಪತಿಯ ಪ್ರೇಮ ಕಥೆ ಈಗ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ತಾಯಿಯ ತ್ಯಾಗದ ಕುರಿತು ಮಗ ಲಿಯೋ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ‘ನನ್ನ ತಂದೆಯನ್ನು ಉಳಿಸಲು ನನ್ನ ತಾಯಿ ದೊಡ್ಡ ಸಹಾಯ ಮಾಡಿದರು. ಇವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧ ಬಹಳ ದೊಡ್ಡದು’ ಎಂದು ಅವರ ಮಗ ಟ್ವಿಟರ್ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗಿದೆ.
ನನ್ನ ಅಪ್ಪ ಡಯಾಲಿಸಿಸ್ಗೆ ಒಳಗಾಗುವಾಗೆಲ್ಲ ನನ್ನ ಅಮ್ಮ ಅವರಿಗಾಗಿ ಸುಮಾರು 5 ತಾಸಿನ ತನಕ ಕಾಯ್ದುಕೊಂಡೇ ಇರುತ್ತಿದ್ದರು. ವಾರದಲ್ಲಿ 3 ದಿನ ಅವರಿಗೆ ಡಯಾಲಿಸಿಸ್ ಮಾಡುತ್ತಿದ್ದರು. ಈತನಕ ನನ್ನ ಅಪ್ಪ 98 ಸಲ ಡಯಾಲಿಸಿಸ್ ಸೆಷನ್ ಮಾಡಿಸಿಕೊಂಡಿದ್ದಾರೆ.
ಕೊನೆಗೆ ಅವರನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದ ಅಮ್ಮ ತನ್ನ ಒಂದು ಮೂತ್ರಪಿಂಡವನ್ನು ಅಪ್ಪನಿಗೆ ದಾನ ಮಾಡಿದರು. ಈಗ ಇಬ್ಬರೂ ಆರಾಮಾಗಿ ಸಂತೋಷದಿಂದ ಇದ್ದಾರೆ. ನನಗಿದೊಂದು ಸುಂದರವಾದ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ ಅವರ ಮಗ ಲಿಯೋ.