ಬಲೂನ್‌ಗಳು, ಬೊಕೆಗಳು ಹಾಗೂ ಚಾಕಲೇಟ್ ಬಾಕ್ಸ್‌ಗಳನ್ನು ಹಿಡಿದು ಡ್ರಮ್‌ಗಳನ್ನು ಜೋರಾಗಿ ಬಡಿದುಕೊಂಡು ಹೋಗುತ್ತಿರುವುದನ್ನು ನೋಡಿದರೆ ಯಾವುದೇ ಮದುವೆ ದಿಬ್ಬಣದ ಮೆರವಣಿಗೆ ಎಂದುಕೊಳ್ಳಬೇಕು.
ಆದರೆ ಛತ್ತೀಸ್‌ಘಡದ ನಕ್ಸಲ್ ಪೀಡಿತ ಗಡ್‌ಚಿರೋಲಿ ಜಿಲ್ಲೆಯ ಬಮ್ರಾಗಾ ತಾಲ್ಲೂಕಿನ ಕೊಯನ್‌ಗುಡ ಗ್ರಾಮದಲ್ಲಿ ಹೀಗೊಂದು ಮೆರವಣಿಗೆಯನ್ನು ಶಾಲೆಗೆ ಸೇರಿದ ಮಕ್ಕಳು ಮೊದಲ ದಿನ ಶಾಲೆಗೆ ಬರುವುದನ್ನು ಆಚರಿಸಲೆಂದು ನಡೆಸಲಾಗುತ್ತಿದೆ.
ಜಿಲ್ಲಾ ಪರಿಷತ್ತಿನ ಶಾಲೆಯ ಪ್ರಾಂಶುಪಾಲರಾದ ವಿನೀತ್ ಪದ್ಮಾವರ್ ಖುದ್ದಾಗಿ ಶಾಲೆಗೆ ದಾಖಲಾದ ಮಕ್ಕಳ ಮನೆಗಳಿಗೆ ಭೇಟಿ ಕೊಟ್ಟಿದ್ದು, ಈ ವೇಳೆ ’ಬ್ಯಾಂಡ್ ಬಜಾ & ಬರಾತ್’ ಶೈಲಿಯಲ್ಲಿ ಶಾಲೆಯನ್ನೇ ಮಕ್ಕಳ ಮನೆಗಳತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ.
“ಕೋವಿಡ್ ಸಾಂಕ್ರಮಿಕದಿಂದ ಮಕ್ಕಳು ಶಾಲೆಗೆ ಬರಲು ಆಗದೇ ಇದ್ದರೆ, ಶಾಲೆಯೇ ಅವರ ಬಳಿಗೆ ಹೋಗಲಿದೆ” ಎಂದು ಪದ್ಮಾವರ್ ತಿಳಿಸಿದ್ದಾರೆ. ಮಕ್ಕಳಿಗೆ ಚಾಕಲೇಟ್‌ಗಳೊಂದಿಗೆ ಶಾಲಾ ಪಠ್ಯಪುಸ್ತಕಗಳನ್ನೂ ಸಹ ಇದೇ ವೇಳೆ ಉಡುಗೊರೆ ರೂಪದಲ್ಲಿ ಹಂಚಲಾಗುತ್ತಿದೆ.
ವಿಶಿಷ್ಟ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಭಮ್ರಾಗಾ ತಾಲ್ಲೂಕಿನಲ್ಲಿ ನಕ್ಸಲ್ ಪಿಡುಗು ವಿಪರೀತವಿರುವ ಕಾರಣ ಯಾವಾಗಲೂ ಭದ್ರತಾ ಸಿಬ್ಬಂದಿ ಇದ್ದೇ ಇರುತ್ತಾರೆ. ಮಳೆಗಾಲದಲ್ಲಿ, ಪಾರ್ಲಕೋಟಾ ನದಿಗೆ ಅಡ್ಡಲಾಗಿರುವ ಒಂದೇ ಒಂದು ಸೇತುವೆ ಮುಳುಗುವ ಕಾರಣ ವಾರಗಳ ಮಟ್ಟಿಗೆ ಈ ತಾಲ್ಲೂಕು ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುತ್ತದೆ.
ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಆಗಾಗ ಎನ್‌ಕೌಂಟರ್‌ಗಳನ್ನು ನೋಡುತ್ತಲೇ ಬೆಳೆಯುವ ಮಕ್ಕಳಿಗೆ ಶಿಕ್ಷಣ ಸಿಕ್ಕಲ್ಲಿ ಯಾವುದೇ ವಿಧ್ವಂಸಕ ಸಿದ್ಧಾಂತಗಳು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ಪದ್ಮಾವರ್ ಅಭಿಪ್ರಾಯ .
ನಗರದಲ್ಲಿರುವ ಮಕ್ಕಳೇನೋ ಲ್ಯಾಪ್ಟಾಪ್ ಬಳಸಿಕೊಂಡು ಹೇಗೋ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಾರೆ. ಆದರೆ ಸರಿಯಾಗಿ ಮೊಬೈಲ್ ಸಂಪರ್ಕವೂ ಇರದ ಈ ತಾಲ್ಲೂಕಿನ ಊರುಗಳಲ್ಲಿ ಕನೆಕ್ಟಿವಿಟಿ ಕನಸಿನ ಮಾತು. ಹಾಗಾಗಿ ಶಿಕ್ಷಕರು ಖುದ್ದು ತಮ್ಮ ವಾಹನಗಳಲ್ಲಿ ಮಕ್ಕಳ ಮನೆಗಳನ್ನು ತಲುಪಿ ಅವರಿಗೆ ಶೈಕ್ಷಣಿಕ ಅಧ್ಯಯನ ಟಚ್ ಬಿಟ್ಟುಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.