ಕೋಮು ಸಂಘರ್ಷದಿಂದ ಹೊತ್ತಿ ಉರಿಸುತ್ತಿರುವ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕಂಡುಬಂದ ಕೋಮುಸೌಹಾರ್ದದ ವರದಿಯಿದು. ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರೂ ದಿಲೀಪ್ ಚೌಗುಲೆ ಮತ್ತು ಘನಿ ತಾಂಬೋಲಿ ಅವರು ಕೊಲ್ಹಾಪುರದ ಶಿವಾಜಿ ಚೌಕ್‌ನಲ್ಲಿ 23 ವರ್ಷಗಳಿಂದ ಜಂಟಿಯಾಗಿ ಪಾನ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ಕೋಮುಗಲಭೆಯ ಕೇಂದ್ರಬಿಂದುವಾಗಿರುವ ಕೊಲ್ಹಾಪುರದಲ್ಲಿ ಇವರ ಸ್ನೇಹ ಮತ್ತು ವ್ಯಾಪಾರ ಕೋಮುಸೌಹಾರ್ದಕ್ಕೆ ಕನ್ನಡಿ ಹಿಡಿದಿದೆ.
ಇವರಿಬ್ಬರೂ 45 ವರ್ಷಗಳಿಂದ ಸ್ನೇಹಿತರು. ಚೌಗುಲೆ ಮತ್ತು ತಾಂಬೋಲಿಯ ಸ್ನೇಹಕ್ಕೆ ಧರ್ಮ ಅಡ್ಡಿಯಾಗಿಲ್ಲ.
“ನಾನು ಹಿಂದೂ ಮತ್ತು ಅವನು ಮುಸ್ಲಿಂ ಎಂಬ ಕಾರಣಕ್ಕೆ ನಾವಿಬ್ಬರು ಇಷ್ಟು ವರ್ಷಗಳ ಕಾಲ ಹೇಗೆ ವ್ಯಾಪಾರ ಮಾಡಿದ್ದೇವೆ ಎಂದು ನೀವು ನನ್ನನ್ನು ಕೇಳುತ್ತಿರುವುದು ತಮಾಷೆಯಾಗಿದೆ. ನಾವು ಬೇರೆ ಬೇರೆ ಧರ್ಮದವರು ಎಂಬುದು ನಮ್ಮ ಗಮನಕ್ಕೆ ಬಂದಿರಲಿಲ್ಲ” ಎಂದು ಚೌಗುಲೆ ಮನಸಾರೆ ನಗೆ ಬೀರಿ ಹೇಳಿದರು.
“ತಲೆಮಾರುಗಳ ಮೂಲಕ ಬೆಳೆದ ಸಂಬಂಧಗಳನ್ನು ವದಂತಿಗಳು ಮತ್ತು ಪ್ರಚಾರಗಳು ಮುರಿಯುತ್ತವೆ ಎಂದು ನೀವು ನಿಜವಾಗಿಯೂ ಭಾವಿಸುತ್ತೀರಾ” ಎಂದು ತಾಂಬೋಲಿ ಕೇಳಿದರು.
ಚೌಗುಲೆ ಮತ್ತು ತಾಂಬೋಲಿ ಅವರು 2000ನೇ ಇಸವಿಯಿಂದ ಪಾನ್ ಅಂಗಡಿಯನ್ನು ನಡೆಸುತ್ತಿದ್ದಾರೆ . ಎಂದಿಗೂ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗದ ಕೊಲ್ಲಾಪುರದಲ್ಲಾಗಿರುವ ಬದಲಾವಣೆ ಬಗ್ಗೆ ಆಶ್ಚರ್ಯ ಪಡುತ್ತಾರೆ.
ಪರಸ್ಪರ ನಾವಿಬ್ಬರೂ ಹಬ್ಬ ಹರಿದಿನಗಳಲ್ಲಿ ಒಬ್ಬೊಬ್ಬರ ಮನೆಗೆ ಹೋಗುತ್ತೇವೆ. ನಾವು ಎಷ್ಟು ನಿಕಟವಾಗಿ ಇದ್ದೇವೆ ಎಂದರೆ ಧಾರ್ಮಿಕ ಗುರುತುಗಳು ನಮಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ ಎಂದು ಚೌಗುಲೆ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೋರಿಸುತ್ತಾ ತಾಂಬೋಲಿ ಹೇಳಿದರು, “ನಾವು ಪ್ರತಿದಿನ ಆ ಪ್ರತಿಮೆಯ ಮೂಲಕ ಹಾದುಹೋಗುತ್ತೇವೆ ಮತ್ತು ಅವರನ್ನು ನಮ್ಮ ನಿಜವಾದ ರಾಜ ಎಂದು ಪರಿಗಣಿಸುತ್ತೇವೆ. ನಮ್ಮ ಸ್ನೇಹಿತರಲ್ಲಿ ಸುಮಾರು 90 ಪ್ರತಿಶತ ಹಿಂದೂಗಳು. ನಮ್ಮಲ್ಲಿ ಯಾರಾದರೂ ನಮ್ಮ ಜೀವನದಲ್ಲಿ ಶಾಂತಿಯನ್ನು ಕದಡಲು ಏಕೆ ಪ್ರಯತ್ನಿಸುತ್ತಾರೆ? ಎಂದರು. ಇವರಿಬ್ಬರ ಸ್ನೇಹ ಕೊಲ್ಹಾಪುರದ ಕಿಚ್ಚಿನಲ್ಲಿ ಗಮನ ಸೆಳೆದಿದೆ.