ಬೆಂಗಳೂರು : ‘SATS’ ತಂತ್ರಾಂಶದಲ್ಲಿ ಪಠ್ಯ ಪುಸ್ತಕಗಳ ಬೇಡಿಕೆ ಸಲ್ಲಿಸುವ ಕುರಿತು ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ ಹೊರಡಿಸಿದೆ.
2024-25ನೇ ಶೈಕ್ಷಣಿಕ ಸಾಲಿಗೆ ಉಲ್ಲೇಖ (1) ರ ಸರ್ಕಾರದ ಆದೇಶದ ಅನ್ವಯ ಪಠ್ಯವುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯು, ಹಿಂದಿನ ಸಾಲಿನಂತೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಅನುಷ್ಠಾನಗೊಳ್ಳಲಿದೆ. ಅದರಂತೆ ಅನುಪಾಲಿಸಿ ನಿರ್ದೇಶಿಸುವ (ಉಸ್ತುವಾರಿ ಮಾಡುವ) ಜವಾಬ್ದಾರಿಯನ್ನು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಆಯಾ ಹಂತದ ಅಧಿಕಾರಿ/ ಸಿಬ್ಬಂದಿಗಳಿಗೆ ನಿಗದಿಪಡಿಸಲಾಗಿದೆ.
2024-25ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಗಳ ಪಠ್ಯಪುಸ್ತಕ, 4 ರಿಂದ 9ನೇ ತರಗತಿಗಳ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10ನೇ ತರಗತಿಗಳ ದಿನಚರಿಗಳ ಬೇಡಿಕೆಯನ್ನು ದಾಖಲಿಸುವ ಪ್ರಕ್ರಿಯೆಯು ದಿನಾಂಕ:18.12.2023 ರಿಂದ 08.01.2024 ರವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಿಂದ ಪರಿಶೀಲನೆ ಹಾಗೂ ಅನುಪಾಲನೆಯ ಚಟುವಟಿಕೆಯು ಏಕಕಾಲದಲ್ಲಿ ಚಾಲನೆಯಲ್ಲಿರುತ್ತದೆ.
ಪೂರ್ವಸಿದ್ಧತಾ ಕಾರ್ಯ ಚಟುವಟಿಕೆಗಳು:
1. SATS ತಂತ್ರಾಂಶದಲ್ಲಿ ರಾಜ್ಯದ ಅಧಿಕೃತ ಶಾಲೆಗಳನ್ನು (ಸರ್ಕಾರಿ/ಅನುದಾನಿತ/ಅನುದಾನ ರಹಿತ/ಇತರೆ ಇಲಾಖೆಗಳಿಂದ ನಡೆಯುವ ಶಾಲೆಗಳು) ದಾಖಲಿಸಿರುವ ಬಗ್ಗೆ, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತಗಳಲ್ಲಿ ಪರಿಶೀಲಿಸಿ, ಒಟ್ಟು ಶಾಲೆಗಳ ನಿಖರವಾದ ಮಾಹಿತಿಯನ್ನು ಖಾತರಿ ಮಾಡಿಕೊಂಡು ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವುದು.
2. ಶಾಲಾವಾರು ಬೇಡಿಕೆಯನ್ನು ಸಲ್ಲಿಸುವಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶೀರ್ಷಿಕೆಗಳಿಗೆ ಮಾತ್ರ (ಪ್ರಥಮ/ದ್ವಿತೀಯ/ತೃತೀಯ ಭಾಷೆ/ಕೋರ್ ವಿಷಯಗಳ ಸಂಖ್ಯೆ ಸಮನಾಗಿರಬೇಕು) ಬೇಡಿಕೆಯನ್ನು ಸಲ್ಲಿಸುವ ಬಗ್ಗೆ ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ ಮತ್ತು ಬ್ಲಾಕ್ ಹಂತದಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳು ಅನುಪಾಲಿಸಿ, ಬೇಡಿಕೆಯು ಆಯಾ ಶಾಲಾ ವಿದ್ಯಾರ್ಥಿಗಳ ದಾಖಲಾತಿ ಅನ್ವಯ ಇರುವುದರ ಬಗ್ಗೆ ಪರಿಶೀಲಿಸಿಕೊಳ್ಳುವುದು. ಇಲ್ಲವಾದಲ್ಲಿ ಸಕಾರಣವನ್ನು ಪಡೆದುಕೊಂಡು ಅನುಮೋದಿಸುವುದು.
3.ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವ ಪೂರ್ವದಲ್ಲಿ ಕ್ಲಸ್ಟರ್ವಾರು, ತಾಲ್ಲೂಕುವಾರು, ಜಿಲ್ಲಾವಾರು ಅಸ್ತಿತ್ವದಲ್ಲಿರುವ ಎಲ್ಲಾ ವಿಧದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವುದು.
4. ಸರ್ಕಾರಿ (ಆದರ್ಶ ಶಾಲೆಗಳು, ಸ್ಥಳೀಯ ಸಂಸ್ಥೆ/ಕಾರ್ಪೋರೇಷನ್) ಶಾಲೆಗಳು, ಅನುದಾನಿತ ಶಾಲೆಗಳು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಹಾಗೂ ಗಡಿನಾಡ ಶಾಲೆಗೆ (ಕನ್ನಡ ಭಾಷಾ ಪಠ್ಯಪುಸ್ತಕಗಳು ಮಾತ್ರ) ಉಚಿತ ವಿಭಾಗದಡಿಯಲ್ಲಿ ಬೇಡಿಕೆಯನ್ನು ದಾಖಲಿಸಬೇಕು.
5. ಅನುದಾನ ರಹಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಯಡಿಯಲ್ಲಿ ನಡೆಯುವ ಶಾಲೆಗಳು ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
6. ಪ್ರಸಕ್ತ ಸಾಲಿಗೆ ದ್ವಿಭಾಷಾ (ಬೈಲಿಂಗ್ಯಲ್) ಮತ್ತು ಆದರ್ಶ ಶಾಲೆಗಳಿಗೆ ಬೇಡಿಕೆಯನ್ನು ದಾಖಲಿಸುವಾಗ ಸದರಿ ಶಾಲೆಗಳಿಗೆ ನಿಗದಿಪಡಿಸಿರುವ ಶೀರ್ಷಿಕೆಗಳನ್ನು ಪರಿಶೀಲಿಸಿ ದಾಖಲಿಸುವುದು.
7. ಎಲ್ಲಾ ಶಾಲೆಗಳು ನಿಗದಿತ ಸಮಯದೊಳಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಿರಂತರವಾಗಿ ಪರಿಶೀಲಿಸಿ, ಅನುಪಾಲಿಸಿ ನಿಖರವಾದ ಬೇಡಿಕೆಯನ್ನು ಪಡೆಯಲು ಅಗತ್ಯ ಕ್ರಮವಹಿಸುವುದು.
8. ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಮತ್ತು ಸಿ.ಆರ್.ಪಿ.ಗಳಿಗೆ ಎಸ್.ಎ.ಟಿ.ಎಸ್.ಕೆ.ಟಿ.ಬಿ.ಎಸ್. ಮಾಡ್ಯೂಲ್ನ ಕುರಿತಂತೆ ತರಬೇತಿಯನ್ನು ಆಯೋಜಿಸುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎ.ಟಿ.ಎಸ್-ಕೆ.ಟಿ.ಬಿ.ಎಸ್. ಮಾಡ್ಯೂಲ್ ನಲ್ಲಿ ಅಳವಡಿಸಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುವುದು.
9. ಪ್ರಮುಖವಾಗಿ ನಲಿ-ಕಲಿ ಶಾಲೆಗಳು, ಆದರ್ಶಶಾಲೆಗಳು, ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಆಂಗ್ಲ ಮಾಧ್ಯಮ ವಿಭಾಗಗಳಿಗೆ (ದ್ವಿಭಾಷಾ ಪಠ್ಯಪುಸ್ತಕ) ಮೀಸಲಾದ ಶೀರ್ಷಿಕೆಗಳ ಬಗ್ಗೆ ಸ್ಪಷ್ಟವಾದ ಅರಿವನ್ನು ಮೂಡಿಸುವುದು.
2024-25ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಶಾಲೆಗಳಿಂದ ಪಡೆಯುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಗೆ ಸಂಬಂಧಿಸಿದಂತೆ, ವಿವಿದ ಹಂತದ ಕಾರ್ಯ ಚಟುವಟಿಕೆಗಳು ಮತ್ತು ಜವಾಬ್ದಾರಿಯನ್ನು ಈ ಕೆಳಕಂಡಂತೆ ನಿರ್ವಹಿಸಲು ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಿದೆ.