1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು ಹೇಳಿದೆ.
ನೀವು ಪ್ರ್ಯಾಕ್ಟಿಕಲ್ ಆಗಿ ಜೀವನವನ್ನು ನೋಡಬೇಕು. ಸಂಪೂರ್ಣ ಜೀವನ ಕೋರ್ಟ್ನಲ್ಲಿಯೇ ಕಿತ್ತಾಡುತ್ತಾ ಕಳೆದಿದ್ದೀರಿ. ನಿಮಗೆ 50 ವರ್ಷ ಹಾಗೂ ಪತಿಗೆ 55 ವರ್ಷ. ಜೀವನಮಾನ ಪೂರ್ತಿ ಕಿತ್ತಾಡುತ್ತಾ ಇರುವ ಬದಲು ದೂರ ಇರುವುದೇ ಸೂಕ್ತವಲ್ಲವೇ ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ಎ.ಎಸ್. ಬೋಪಣ್ಣ ನೇತೃತ್ವದ ಪೀಠ ಹೇಳಿದೆ.
ದಂಪತಿಗೆ ವಿಚ್ಛೇದನ ನೀಡಿದ್ದ ತ್ರಿಪುರ ಹೈಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚ್ಚೇದನದ ವಿಚಾರದಲ್ಲಿ ಹೈಕೋರ್ಟ್ ನಿರ್ಧಾರ ತಪ್ಪಾಗಿದೆ. ಜೀವನಾಂಶಕ್ಕೆ ಇಲ್ಲಿ ಗೌರವ ನೀಡಲಾಗಿಲ್ಲ ಎಂಬುದು ಪತ್ನಿ ಪರ ವಕೀಲರ ವಾದವಾಗಿದೆ.
ಜೀವನಾಂಶದ ಕುರಿತಂತೆ ಪರಸ್ಪರ ನಿರ್ಧಾರ ತೆಗೆದುಕೊಳ್ಳುವಂತೆ ದಂಪತಿಗೆ ಸೂಚಿಸಿದ ಕೋರ್ಟ್ ಡಿಸೆಂಬರ್ನಲ್ಲಿ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
1995 ಜುಲೈ 13ರಂದು ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಪತ್ನಿಯು ಐಎಎಸ್ ಅಧಿಕಾರಿಯ ಪುತ್ರಿಯಾಗಿದ್ದು, ಶ್ರೀಮಂತ ಮನೆತನಕ್ಕೆ ಸೇರಿದವರಾಗಿದ್ದರು. ಪತಿಯು ಮನೆ ಅಳಿಯ ಆಗಿ ಇರಬೇಕು ಎಂಬುದು ಪತ್ನಿಯ ಆಸೆಯಾಗಿತ್ತು. ಆದರೆ ನಿರುದ್ಯೋಗಿ ಸಹೋದರ ಹಾಗೂ ವೃದ್ಧ ತಾಯಿಯನ್ನು ನಾನು ಹೇಗೆ ಬಿಟ್ಟು ಬರುವುದು ಎಂಬುದು ಪತಿಯ ವಾದವಾಗಿದೆ.