ಕಾಮನ್ ವೆಲ್ತ್ ಕ್ರೀಡಾಕೂಟ ಆರಂಭವಾಗಿದ್ದು, ಭಾರತ ಪದಕ ಬೇಟೆ ನಡೆಸಿದೆ. ಈ ನಡುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಪ್ರತಿಭೆ ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ.
ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸುವ ಮೂಲಕ ಸಂಚಲನ ಮೂಡಿಸಿದ್ದ ಭಾರತದ ಮೊದಲ ಸಲಿಂಗಕಾಮಿ ಅಥ್ಲೀಟ್ ಆಗಿರುವ ದ್ಯುತಿ ಚಂದ್, ಬರ್ಮಿಂಗ್ ಹ್ಯಾಮ್ನಲ್ಲಿ 2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಎಲ್ಜಿಬಿಟಿ (ಲೆಸ್ಬಿಯನ್, ಗೇ, ದ್ವಿಲಿಂಗಿ ಮತ್ತು ಟ್ರಾನ್ಸ್ಜೆಂಡರ್) ಧ್ವಜವನ್ನು ಹಿಡಿದಿದ್ದರು. ಆಕೆಯೊಂದಿಗೆ ಇತರ ಆರು ಕ್ರೀಡಾಪಟುಗಳು ಮತ್ತು ಕಾರ್ಯಕರ್ತರು ಇದ್ದರು.
ಬ್ರಿಟಿಷ್ ಡೈವರ್ ಟಾಮ್ ಡೇಲಿ ಅವರು ಧ್ವಜವನ್ನು ಹಿಡಿದ ವಿವಿಧ ದೇಶಗಳ ಏಳು ಎಲ್.ಜಿ.ಬಿ.ಟಿ. ಕ್ರೀಡಾಪಟುಗಳು ಮತ್ತು ಕಾರ್ಯಕರ್ತರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅರ್ಧದಷ್ಟು ಕಾಮನ್ವೆಲ್ತ್ ದೇಶಗಳಲ್ಲಿ ಸಲಿಂಗಕಾಮವು ಇನ್ನೂ ಅಪರಾಧವಾಗಿದೆ, ಕೆಲವು ಕಡೆ ಗರಿಷ್ಠ ಶಿಕ್ಷೆ ಮರಣದಂಡನೆಯಾಗಿದೆ ಎಂಬುದನ್ನು ಅವರು ಪೋಸ್ಟ್ನಲ್ಲಿ ದಾಖಲಿಸಿದ್ದಾರೆ.
ನಮಗಾಗಿ ಈ ಉದ್ಘಾಟನಾ ಸಮಾರಂಭವು ವೀಕ್ಷಿಸುತ್ತಿರುವ ಶತಕೋಟಿ ಜನರಿಗೆ ಎಲ್.ಜಿ.ಬಿ.ಟಿ. ಪ್ರಸ್ತುತತೆಯನ್ನು ತೋರಿಸುವ ಪ್ರಯತ್ನದ ಬಗ್ಗೆ ತಿಳಿಸಿರುವ ಅವರು ತನ್ನೊಂದಿಗೆ ಧ್ವಜ ಹಿಡಿದಿದ್ದ ಇತರ ಆರು ಮಂದಿಗೆ ಜೈಕಾರ ಹಾಕಿದರು.
ದ್ಯುತಿ ಚಂದ್ ಭಾರತದ ರಾಷ್ಟ್ರೀಯ ತಂಡದ ಮೊದಲ ಸಲಿಂಗಕಾಮಿ ಕ್ರೀಡಾಪಟು. ಅವರು 2019 ರಲ್ಲಿ ತಮ್ಮ ಲೈಂಗಿಕತೆಯನ್ನು ಬಹಿರಂಗಪಡಿಸಿದ್ದರು ಮತ್ತು ಅಂದಿನಿಂದ ಎಲ್.ಜಿ.ಬಿ.ಟಿ. ಸಮುದಾಯದ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದ್ದಾರೆ.
ಈ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟವು ಜುಲೈ 28 ರಂದು ಪ್ರಾರಂಭವಾಗಿದ್ದು ಆಗಸ್ಟ್ 8ರವರೆಗೆ ಮುಂದುವರಿಯುತ್ತದೆ. 15 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ 205 ಸದಸ್ಯರ ಬೃಹತ್ ತಂಡ ಅಲ್ಲಿ ಪಾಲ್ಗೊಂಡಿದೆ.