ಕಾಮೆಡಿಯನ್ ಹಾಗೂ ಟಿವಿ ಹೋಸ್ಟ್ ಕಪಿಲ್ ಶರ್ಮಾ ನೆಟ್‌ಫ್ಲಿಕ್ಸ್‌ನ ’ಐ ಆಮ್ ನಾಟ್ ಡನ್ ಯೆಟ್’ ಸರಣಿಯಲ್ಲಿ ಕಾಣಿಸಲಿದ್ದಾರೆ. ಜನವರಿ 28ರಂದು ಬಿಡುಗಡೆಯಾಗಲಿರುವ ಈ ಸರಣಿಯು ಸ್ಟ್ರೀಮಿಂಗ್ ದಿಗ್ಗಜನ ಮೂಲಕ ಕಪಿಲ್ ಮೊದಲ ಬಾರಿಗೆ ಕಾಣಿಸಿಕೊಳ್ಳಲಿರುವ ಶೋ ಆಗಿದೆ.
ಈ ಶೋನ ಟೀಸರ್ ಅನ್ನು ಶೇರ್ ಮಾಡಿಕೊಂಡ ಕಪಿಲ್, “ನಾನು ಉದ್ಯಮದಲ್ಲಿ 25ಕ್ಕಿಂತ ಹೆಚ್ಚು ವರ್ಷಗಳ ಕಾಲ ಬಂದಿದ್ದೇನೆ, ಮತ್ತು ಟಿವಿಯಲ್ಲಿ 15 ವರ್ಷಕ್ಕಿಂತ ಹೆಚ್ಚಿನ ಕಾಲದಿಂದ ಕಾಣಿಸಿಕೊಂಡು ಬಂದಿದ್ದೇನೆ. ವಾಸ್ತವದಲ್ಲಿ ನಾನು ಕಾಮಿಡಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ ಏಕೆಂದರೆ ನಾವು ಪಂಜಾಬಿಗಳು ಯಾವಾಗಲೂ ತಮಾಷೆ ಮಾಡುತ್ತಲೇ ಇರುತ್ತೇವೆ. ಅದು ಸಹಜವಾಗಿಯೇ ಬರುತ್ತದೆ. ಇದಕ್ಕೂ ಸಹ ನಿಮಗೆ ಪೇಮೆಂಟ್ ಸಿಗುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ,” ಎಂದು ಕಪಿಲ್ ಈ ವಿಡಿಯೋದಲ್ಲಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡಿದ್ದ ಒಂದು ಟ್ವೀಟ್ ತಮಗೆಂಥಾ ಫಜೀತಿ ತಂದಿಟ್ಟಿತು ಎಂದು ಹೇಳಿಕೊಂಡಿರುವ ಕಪಿಲ್, ಅದೊಂದು ಕುಡಿದ ಮತ್ತಿನಲ್ಲಿ ಹಾಕಿದ ಟ್ವೀಟ್ ಎಂದು ಹೇಳಿಕೊಂಡಿದ್ದು, “ಅದಾದ ಕೂಡಲೇ ಮಾಲ್ಡೀವ್ಸ್‌ಗೆ ತೆರಳಿದ ನಾನು ಅಲ್ಲಿ 8-9 ದಿನಗಳ ಕಾಲ ಇದ್ದೆ. ಮಾಲ್ಡೀವ್ಸ್ ತಲುಪಿದ ವೇಳೆ, ನಾನು ಅಂತರ್ಜಾಲ ಇಲ್ಲದೇ ಇರುವ ರೂಂ ಅನ್ನು ಕೇಳಿದೆ. ಅದಕ್ಕೆ ಅವರು ’ನೀವು ಮದುವೆಯಾಗಿದ್ದೀರಾ?’ ಎಂದು ಕೇಳಿದಾಗ, ’ಇಲ್ಲ ನಾನು ಸುಮ್ಮನೇ ಟ್ವೀಟ್ ಮಾಡಿದೆ’ ಎಂದು ಹೇಳಿದೆ,” ಎಂದ ಕಪಿಲ್ ತಮ್ಮದೇ ಶೈಲಿಯ ಹಾಸ್ಯದಲ್ಲಿ ಆ ಘಟನೆಯನ್ನು ವಿವರಿಸಿದ್ದಾರೆ.
“ಅಲ್ಲಿನ ನನ್ನ ವಾಸ್ತವ್ಯಕ್ಕೆ 9 ಲಕ್ಷ ರೂ.ಗಳು ಖರ್ಚಾಗಿದ್ದವು, ಇಷ್ಟು ಮೊತ್ತವನ್ನು ನಾನು ನನ್ನ ಇಡೀ ಶಿಕ್ಷಣದ ಮೇಲೂ ಖರ್ಚು ಮಾಡಿಲ್ಲ. ಆ ಒಂದು ಸಾಲು ನನಗೆ ಅಷ್ಟು ಖರ್ಚು ಮಾಡಿಸಿತು,” ಎಂದು ಹೇಳಿದ ಕಪಿಲ್, “ಟ್ವಿಟರ್ ವಿರುದ್ಧ ನಾನು ದೂರು ದಾಖಲಿಸಬೇಕು,” ಎಂದಿದ್ದಾರೆ.
ಮೈಕ್ರೋಬ್ಲಾಗಿಂಗ್ ಜಾಲತಾಣವು “ಅದೊಂದು ಕುಡಿತದ ಟ್ವೀಟ್” ಎಂದು ತಮ್ಮ ಅನುಯಾಯಿಗಳನ್ನು ಎಚ್ಚರಿಸಬಹುದಿತ್ತು ಎಂದ ಕಪಿಲ್, ಕೆಲವೊಂದು ಟ್ವೀಟ್‌ಗಳಿಗೆ ಯಾವು ಹೊಣೆಗಾರರಾದರೂ ಕೆಲವೊಂದಕ್ಕೆ ಹೆಂಡದ ಬ್ರಾಂಡ್‌ಗಳು ಕಾರಣ ಎಂದಿದ್ದಾರೆ.
2016ರಲ್ಲಿ ಪ್ರಧಾನಿಗೆ ಮಾಡಿದ್ದ ಟ್ವೀಟ್ ಒಂದರಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ವಿರುದ್ಧ ದೂರಿದ್ದ ಕಪಿಲ್, “ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ಕಟ್ಟಿದ್ದೇನೆ ಹಾಗಿದ್ದರೂ ನನ್ನ ಕಚೇರಿಯನ್ನು ಕಟ್ಟಿಕೊಳ್ಳಲು ಬಿಎಂಸಿ ಕಚೇರಿಯಲ್ಲಿ ಐದು ಲಕ್ಷ ರೂಪಾಯಿ ಲಂಚ ಕಟ್ಟಬೇಕಾಗಿದೆ @narendramodi,” ಎಂದು ಟ್ವೀಟ್ ಮಾಡಿದ್ದ ಕಪಿಲ್ ಇದರ ಬೆನ್ನಿಗೇ ಅಂಧೇರಿಯಲ್ಲಿ ಅಕ್ರಮ ನಿರ್ಮಾಣ ಕೆಲಸವೊಂದರ ಸಂಬಂಧ ವಿವಾದದಲ್ಲಿ ಸಿಲುಕಿದ್ದರು.
ಅನುಮತಿ ಇಲ್ಲದೇ ತಮ್ಮ ಜಾಗದಲ್ಲಿ ಎರಡನೇ ಅಂತಸ್ತನ್ನು ಕಪಿಲ್ ಕಟ್ಟಿಕೊಂಡಿದ್ದಾರೆ ಎಂದು ಬಿಎಂಸಿಯ ಸ್ಥಳೀಯ ವಾರ್ಡ್ ಕಚೇರಿ ಸ್ಪಷ್ಟೀಕರಣ ಕೊಟ್ಟಿದ್ದಲ್ಲದೇ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, “ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ,” ಎಂದು ಟ್ವೀಟ್ ಮಾಡಿದ್ದರು.