ಮುಂಬೈ: ಪತಿ ತನ್ನ ತಾಯಿಗೆ ಸಮಯ ಮತ್ತು ಹಣಕಾಸಿನ ನೆರವು ನೀಡುವುದು ಕೌಟುಂಬಿಕ ಹಿಂಸೆ ಆಗದು ಎಂದು ಸ್ಥಳೀಯ ನ್ಯಾಯಾಲಯ ಹೇಳಿದೆ.
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ತನ್ನ ಪತಿ ಮತ್ತು ಆತನ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ 43 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
ಪತಿ ತನ್ನ ತಾಯಿಗೆ ಸಮಯ ಮತ್ತು ಹಣವನ್ನು ನೀಡುತ್ತಿದ್ದಾರೆ ಎಂಬ ಕುಂದುಕೊರತೆಯನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆಶಿಶ್ ಅಯಾಚಿತ್ ಮಂಗಳವಾರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ಸಹಾಯಕರಾದ ಮಹಿಳೆ, ತನ್ನ ಗಂಡ ಆಗಾಗ್ಗೆ ತಾಯಿಗೆ ಹಣಕಾಸಿನ ನೆರವು ನೀಡುತ್ತಾನೆ. ತಾಯಿಯೊಂದಿಗೆ ಸಮಯ ಕಳೆಯುತ್ತಾನೆ ಇದು ದಾಂಪತ್ಯದಲ್ಲಿ ಘರ್ಷಣೆಗೆ ಕಾರಣವಾಯಿತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹೆಂಡತಿಯ ಸಮರ್ಥನೆಗಳನ್ನು “ಅಸ್ಪಷ್ಟ” ಮತ್ತು “ಸತ್ಯತೆ ವಿಶ್ವಾಸದ ಕೊರತೆ” ಎಂದು ತಳ್ಳಿಹಾಕಿದ ನ್ಯಾಯಾಲಯ ಅಂತಿಮವಾಗಿ ಆಕೆಯ ಮನವಿಯನ್ನು ತಳ್ಳಿಹಾಕಿತು.