ಕೋವಿಡ್ ಕಾರಣದಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡರೆ, ಇನ್ನು ಹಲವರು ಇದರ ಪ್ರಯೋಜನ ಪಡೆದು, ಲಾಭವನ್ನೂ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಯುಟ್ಯೂಬ್ ಚಾನೆಲ್ಗಳ ಸಂಖ್ಯೆಯೂ ಹೆಚ್ಚಿ ಅದರಲ್ಲಿ ಲಾಭ ಮಾಡಿಕೊಳ್ಳುತ್ತಿರುವ ದೊಡ್ಡ ವರ್ಗವೇ ಇದೆ.
ಅಂಥವರಲ್ಲಿ ಒಬ್ಬರು ಜ್ಞಾನೇಂದ್ರ ಶುಕ್ಲಾ ಮತ್ತು ಜೈ ವರ್ಮಾ. ಕೋವಿಡ್ ಬರುವ ಮುಂಚೆಯೇ Being Chhattisgarhiya ಎಂಬ ಯುಟ್ಯೂಬ್ ಚಾನೆಲ್ ಶುರು ಮಾಡಿದ್ದರೂ ಅದರ ಬಗ್ಗೆ ಗಮನ ಹರಿಸದಿದ್ದ ಈ ಜೋಡಿ, ಕೋವಿಡ್ನಿಂದ ಕೆಲಸ ಕಳೆದುಕೊಂಡ ಮೇಲೆ ವಿಧವಿಧವಾದ ವಿಷಯಗಳೊಂದಿಗೆ ಯುಟ್ಯೂಬ್ಗೆ ಹೊಸ ರೂಪ ನೀಡಿದ್ದಾರೆ. ಉದ್ಯೋಗದಿಂದ ತಾವು ಗಳಿಸುತ್ತಿರುವ ಸಂಬಳಕ್ಕಿಂತಲೂ ಹೆಚ್ಚಿನ ಆದಾಯವನ್ನು ಇವರೀಗ ಗಳಿಸುತ್ತಿದ್ದಾರೆ. ಯುಟ್ಯೂಬ್ನಲ್ಲಿ ಇವರ ನಟನೆಯನ್ನು ಮೆಚ್ಚುತ್ತಿದ್ದಾರೆ ಹಲವರು. ಈಗ ಬಾಲಿವುಡ್ ಸೇರುವ ಆಸೆ ಈ ಜೋಡಿಯದ್ದು.
ಸುಮಾರು 1.20 ಲಕ್ಷ ಚಂದಾದಾರರನ್ನು ಹೊಂದಿರುವ ಇವರ ಯೂಟ್ಯೂಬ್ ಚಾನೆಲ್ನಲ್ಲಿ ಇದಾಗಲೇ 200 ಕ್ಕೂ ಹೆಚ್ಚು ವಿಡಿಯೋಗಳು ಅಪ್ಲೋಡ್ ಆಗಿವೆ. ಇದರ ವಿಶೇಷತೆ ಏನೆಂದರೆ ಇವರ ವಿಡಿಯೋ ಸಂಪೂರ್ಣ ಹಳ್ಳಿಮಯವಾಗಿದೆ. ಎತ್ತಿನ ಬಂಡಿಯ ಮೇಲೆ ಕುಳಿತು ಹಳ್ಳಿ ಹಳ್ಳಿಗಳನ್ನು ತಿರುಗಿ ಅಲ್ಲಿನ ಜನಜೀವನವನ್ನು ಕಲೆ ಹಾಕಿ, ಅಲ್ಲಿರುವ ವಿಶೇಷತೆಗಳನ್ನು ಹೊರಕ್ಕೆ ತಂದು ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಹಳ್ಳಿಗಳ ಚಿತ್ರಣ ನೆಟ್ಟಿಗರ ಗಮನ ಸೆಳೆಯುತ್ತಿವೆ. ಇದರಿಂದಾಗಿ ದಿನದಿಂದ ದಿನಕ್ಕೆ ಇವರ ಯೂಟ್ಯೂಬ್ ವ್ಯೂಸ್ ಹೆಚ್ಚುತ್ತಲೇ ಸಾಗಿದೆ.
ಅವರು ಈಗ ತಿಂಗಳಿಗೆ ಎರಡರಿಂದ ಮೂರು ವೀಡಿಯೊಗಳನ್ನು ತಯಾರಿಸುತ್ತಾರೆ, ಇದರ ಪರಿಣಾಮವಾಗಿ, ಅವರು ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿಗಳನ್ನು ($483.93) ಗಳಿಸುತ್ತಿದ್ದಾರೆ. ಇದು ಆರಂಭಿಕ ಆದಾಯವಷ್ಟೇ. ಇನ್ನೂ ಹೆಚ್ಚಿನ ಗಳಿಕೆ ಸಾಧ್ಯ ಎನ್ನುತ್ತದೆ ಈ ಜೋಡಿ. ತಾವು ಪಡೆಯುತ್ತಿದ್ದ ಸಂಬಳಕ್ಕಿಂತ ಇದು 15 ಸಾವಿರ ರೂ. ಹೆಚ್ಚಾಗಿದೆ ಎನ್ನುತ್ತಾರೆ ಅವರು. ಮನಸ್ಸೊಂದಿದ್ದರೆ ಏನು ಬೇಕಾದರೂ ಮಾಡಬಹುದು, ಯಾವ ವಿಷಯದರಲ್ಲಾದರೂ ಪರಿಣತಿ ಪಡೆದು ಸಂಪಾದಿಸಬಹುದು ಎಂಬ ಕಿವಿ ಮಾತು ಹೇಳುತ್ತಾರೆ.