ಕೊರೊನಾ ವೈರಸ್ ಮಹಾಮಾರಿ ವಿಶ್ವದ ಚಿತ್ರಣವನ್ನು ಬದಲಿಸಿದೆ. ಎರಡನೇ ಅಲೆ ನಂತ್ರ ಈಗ ಒಮಿಕ್ರಾನ್ ಭಯ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಮಿಕ್ರಾನ್ ನ ಎರಡು ಪ್ರಕರಣ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಒಮಿಕ್ರಾನ್ ಈಗ ಬುಡಕ್ಕೆ ಬಂದಿದ್ದು, ಭಯ ಹೆಚ್ಚಾಗಿದೆ. ಎರಡನೇ ಅಲೆಯಲ್ಲಿ ಮಾಡಿದ ನಿರ್ಲಕ್ಷ್ಯವನ್ನು ಈಗ್ಲೂ ಮುಂದುವರಿಸದೆ ಕೆಲವೊಂದು ಎಚ್ಚರಿಕೆ ಕ್ರಮಕೈಗೊಂಡಲ್ಲಿ ಕೊರೊನಾದಿಂದ ನಿಮ್ಮನ್ನು ರಕ್ಷಿಸಬಹುದು.
ಒಮಿಕ್ರಾನ್ ದಿಂದ ರಕ್ಷಣೆ ಪಡೆಯುವುದು ಹೇಗೆ? :
ಲಸಿಕೆ : ಭಾರತದಲ್ಲಿ ಲಸಿಕೆ ಅಭಿಯಾನ ಮುಂದುವರೆದಿದೆ, ಭಾರತದ ಅನೇಕರು ಈಗಾಗಲೇ ಲಸಿಕೆ ಪಡೆದಿದ್ದಾರೆ. ಆದ್ರೆ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಲಸಿಕೆ ಪಡೆಯದಿರುವವರು ಅಪಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯುವ ಅಗತ್ಯವಿದೆ. ಲಸಿಕೆ ಪಡೆಯದ ಜನರಿಗೆ, ಲಸಿಕೆ ಪಡೆಯುವಂತೆ ಸಲಹೆ ನೀಡುವ ಅಗತ್ಯವೂ ಇದೆ.
ಮಾಸ್ಕ್ ಅಗತ್ಯ : ಕೊರೊನಾದಿಂದ ರಕ್ಷಣೆ ಬೇಕೆಂದರೆ ಮಾಸ್ಕ್ ಕಡ್ಡಾಯ. ಮೊದಲ ಅಲೆಯಿಂದಲೂ ಮಾಸ್ಕ್ ಮಹತ್ವದ ಬಗ್ಗೆ ವೈದ್ಯರು, ತಜ್ಞರು ಸಲಹೆ ನೀಡುತ್ತಲೇ ಬಂದಿದ್ದಾರೆ. ಕೊರೊನಾ ಎರಡನೇ ಅಲೆ ಮುಗಿದ ನಂತ್ರ ಮಾಸ್ಕ್ ಧರಿಸುವವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗಿದೆ. ಅನೇಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಇದು ತಪ್ಪು. ಮಕ್ಕಳಿಂದ ಹಿಡಿದು ಎಲ್ಲರೂ ಮನೆಯಿಂದ ಹೊರ ಬೀಳುವಾಗ ಮಾಸ್ಕ್ ಧರಿಸುವುದು ಅಗತ್ಯವಾಗಿದೆ.
ಸಾಮಾಜಿಕ ಅಂತರ : ಕೊರೊನಾದ ಈ ಹೊಸ ರೂಪಾಂತರವನ್ನು ತಪ್ಪಿಸಬೇಕಾದರೆ, ಪ್ರತಿಯೊಬ್ಬರೂ ಮೊದಲಿನಂತೆ ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಜನಸಂದಣಿ ಇರುವ ಸ್ಥಳಗಳಿಂದ ದೂರವಿರಬೇಕು.
ಕೈ ನೈರ್ಮಲ್ಯ : ಕೈಗಳನ್ನು ಸಾಬೂನು ಮತ್ತು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸುತ್ತಿರಬೇಕು. 20 ನಿಮಿಷಗಳ ಕಾಲ ನೀರು ಮತ್ತು ಸಾಬೂನಿನಿಂದ ಕೈಗಳನ್ನು ತೊಳೆಯಬೇಕು. ಹೊರಗೆ ಹೋಗಿ ಮನೆಗೆ ಬಂದ ನಂತ್ರ ಸ್ಯಾನಿಟೈಜರ್ ನಿಂದ ಕೈಗಳನ್ನು ಸ್ವಚ್ಛಗೊಳಿಸಬೇಕು. ಹಾಗೆ ಸ್ನಾನ ಮಾಡುವುದು ಬಹಳ ಮುಖ್ಯ.