ಚಳಿಗಾಲದಲ್ಲಿ ಮೊಸರು ತಯಾರಿಸುವುದು ಕಷ್ಟದ ಕೆಲಸವೇ. ಚಳಿಗೆ ಹಾಲು ಬಹು ಬೇಗ ಹೆಪ್ಪಾಗುವುದೇ ಇಲ್ಲ. ಈ ಸಂದರ್ಭದಲ್ಲಿ ಅತ್ಯುತ್ತಮ ಮೊಸರನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಮೊಸರು ಮನೆಯಲ್ಲೇ ತಯಾರಿಸಲು ನೀರು ಬೆರೆಸದ ಹಾಲನ್ನು ಸರಿಯಾಗಿ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಉಗುರು ಬೆಚ್ಚಗೆ ಇರುವಾಗ ಒಂದು ಲೀಟರ್ ಹಾಲಿಗಾದರೆ ಮೂರು ಚಮಚದಷ್ಟು ಮಜ್ಜಿಗೆ ಅಥವಾ ಮೊಸರು ಬೆರೆಸಿ. ಚೆನ್ನಾಗಿ ಕಲಕಿ.
ಚಳಿಗಾಲದಲ್ಲಿ ಇದಕ್ಕೆ ಹೆಚ್ಚು ಸಮಯ ಬೇಕಾಗುವುದರಿಂದ ಸಂಜೆ ವೇಳೆ ಹಾಕಿಟ್ಟರೆ ಮರುದಿನ ಬೆಳಗಿನ ಜಾವಕ್ಕೆ ರುಚಿಕರವಾದ ದಪ್ಪನೆಯ ಮೊಸರು ತಯಾರಾಗುತ್ತದೆ. ಬೇಸಿಗೆಯಲ್ಲಾದರೆ 5-6 ಗಂಟೆ ಸಾಕು.
ಮೊಸರನ್ನು ನಿತ್ಯ ಊಟದ ವೇಳೆ ಸೇವಿಸುವುದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ. ದೇಹವನ್ನು ತಂಪಾಗಿಡುತ್ತದೆ. ಸೋಂಕಿನ ಸಮಸ್ಯೆಗಳು ದೂರವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.