ಸಾಮಾನ್ಯವಾಗಿ ನಾವು ಆ ಕರಿ ಈ ಕರಿ ಅಂತ ರೆಸ್ಟೋರೆಂಟ್ ಗಳಲ್ಲಿ ಸವಿದಿರುತ್ತೇವೆ. ಯಾಕೆಂದರೆ ರೆಸ್ಟೋರೆಂಟ್ ಗಳಲ್ಲಿ ಮಾಡುವ ಕರಿಗಳ ರುಚಿಯೇ ಬೇರೆ. ಅಂತಹ ರುಚಿ ನಾವು ಮಾಡುವ ಅಡುಗೆಯಲ್ಲಿ ಇರಬೇಕೆಂದರೆ ಇಲ್ಲಿದೆ ಸ್ಪೆಷಲ್ ಆಗಿ ತಯಾರಿಸುವ ಆಲೂಮಟರ್ ಕರಿ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಕ್ಯೂಬ್ ರೀತಿ ಕತ್ತರಿಸಿದ ಆಲೂಗಡ್ಡೆ – 3-4
ಬಟಾಣಿ – 200 ಗ್ರಾಂ
ಹಸಿಮೆಣಸಿನಕಾಯಿ – 2
ಟೊಮ್ಯಾಟೊ ಪ್ಯೂರಿ – 200 ಗ್ರಾಂ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ – 1 ಚಮಚ
ತುಪ್ಪ 3 – 4 ಚಮಚ
ಅರಿಶಿಣ ಪುಡಿ – 1/2 ಚಮಚ
ಅಚ್ಚಖಾರದ ಪುಡಿ – 1 ಚಮಚ
ಜೀರಿಗೆ ಪುಡಿ – 1/2 ಚಮಚ
ಧನಿಯಾ ಪುಡಿ – 1/4 ಚಮಚ
ಗರಂ ಮಸಾಲೆ – 1/2 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಕುಕ್ಕರಿನಲ್ಲಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಜೀರಿಗೆಯನ್ನು ಹಾಕಿ ಕೆಲ ಕಾಲ ಹಸಿಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ ಕೊಳ್ಳಬೇಕು. ಈರುಳ್ಳಿ ಕೆಂಪಗಾದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ನಂತರ ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ 2 ನಿಮಿಷ ಹುರಿಯಬೇಕು. ಈಗ ಮಸಾಲೆ ಪದಾರ್ಥಗಳಾದ ಅರಿಶಿಣ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು.
ನಂತರ ಬಟಾಣಿಯನ್ನು ಹಾಕಿ ಮಿಶ್ರಣ ಮಾಡಬೇಕು. ಟೊಮ್ಯಾಟೊ ಪ್ಯೂರಿಯನ್ನು ಅದರೊಂದಿಗೆ ಸೇರಿಸಿ ಎರಡು ನಿಮಿಷಗಳ ಕಾಲ ಬೇಯಿಸಬೇಕು. ನಂತರ 1 ಕಪ್ ನೀರು ಹಾಕಿ ಉಪ್ಪು ಮತ್ತು ಗರಂ ಮಸಾಲೆಯನ್ನು ಹಾಕಬೇಕು. ನಂತರ ಕುಕ್ಕರ್ ಮುಚ್ಚಳ ಹಾಕಿ 2 ವಿಷಲ್ ಬಂದ ನಂತರ ಆರಲು ಬಿಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ಆಲೂ ಮಟರ್ ಕರಿ ಚಪಾತಿ ಜೊತೆ ಸವಿಯಲು ರೆಡಿ.