ಮೊದಲೇ ಆರ್ಥಿಕ ದಿವಾಳಿತನದಿಂದ ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನದ ಬಗ್ಗೆ ಇದೀಗ ಮತ್ತೊಂದು ನಾಚಿಕೆಗೇಡಿನ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಅನೇಕ ಭಿಕ್ಷುಕರು ಯಾತ್ರಾರ್ಥಿ ವೀಸಾ ಬಳಕೆ ಮಾಡಿಕೊಂಡು ಸೌದಿ ಅರೇಬಿಯಾ, ಇರಾನ್ ಹಾಗೂ ಇರಾಕ್ನಂತಹ ದೇಶಗಳಿಗೆ ತೆರಳಿ ಅಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಸ್ಲಾಮಾಬಾದ್ನಲ್ಲಿ ಬುಧವಾರದಂದು ನಡೆದ ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿಯಲ್ಲಿ ಇದು ಬಹಿರಂಗಗೊಂಡಿದೆ ಎನ್ನಲಾಗಿದೆ. ಪಾಕಿಸ್ತಾನದ ಸಾಗರೋತ್ತರ ಸಚಿವಾಲಯದ ಕಾರ್ಯದರ್ಶಿ ಜುಲ್ಫಿಕರ್ ಹೈದರ್ ದೇಶವನ್ನು ತೊರೆಯುವ ಕುಶಲ ಹಾಗೂ ಕೌಶಲ್ಯರಹಿತ ಕಾರ್ಮಿಕರ ಚರ್ಚೆಯ ಸಂದರ್ಭದಲ್ಲಿ ಸೆನೆಟ್ ಸಮಿತಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಂಧಿಸಲ್ಪಟ್ಟಿರುವ 90 ಪ್ರತಿಶತ ಪಾಕ್ನ ಪ್ರಜೆಗಳು ವೃತ್ತಿಪರ ಭಿಕ್ಷುಕರು ಎಂದು ಹೇಳಿದ್ದಾರೆ.
ಭಿಕ್ಷುಕರು ಸಾಮೂಹಿಕವಾಗಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. ಅವರಲ್ಲಿ ಅನೇಕರು ದೋಣಿಯಲ್ಲಿ ಪ್ರಯಾಣಿಸುತ್ತಾರೆ. ಬಳಿಕ ಉಮ್ರಾ ಮತ್ತು ವಿಸಿಟ್ ವೀಸಾಗಳನ್ನು ದುರಪಯೋಗಪಡಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಾರೆ. ಪವಿತ್ರ ಸ್ಥಳಗಳಲ್ಲಿ ಬಂಧಿತರಾದ ಗಮನಾರ್ಹ ಸಂಖ್ಯೆಯ ಪಿಕ್ಪಾಕೆಟ್ ಮಾಡುವವರು ಸಹ ಪಾಕಿಸ್ತಾನಿ ಪ್ರಜೆಗಳು ಎನ್ನಲಾಗಿದೆ.