alex Certify ಸೈಟ್, ಮನೆ ಇಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಮನೆ ಹಂಚಿಕೆಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಟ್, ಮನೆ ಇಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಮನೆ ಹಂಚಿಕೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶದಂತೆ ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

shivamoggacitycorp.org ಜಾಲತಾಣದ Ashraya Yojane Application ಮೆನುವಿನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.24 ಪ್ರಾರಂಭದ ದಿನಾಂಕವಾಗಿದ್ದು, ಏಪ್ರಿಲ್ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಮೇ 7 ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.

18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.(ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಅಭ್ಯರ್ಥಿಯಾಗಿರಬೇಕು). ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಿರಬೇಕು. ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಸ್ವಂತ ನಿವೇಶನ, ಮನೆಯನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆಯಡಿ ನಿವೇಶನ/ವಸತಿ ಸೌಲಭ್ಯ ಪಡೆದಿರಬಾರದು. ಯಾವುದಾದರೂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ ವಿವರ ನೀಡುವುದು. ಅರ್ಜಿದಾರರ ಹೆಸರಿನಲ್ಲಿ ಇರುವ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ(86,700 ರೂ. ಗಳಿಗಿಂತ ಕಡಿಮೆ ಆದಾಯ ಹೊಂದಿರಬೇಕು) ಹೊಂದಿರಬೇಕು. ತೃತೀಯ ಲಿಂಗಿಗಳು(ಟ್ರಾನ್ಸ್‍ಜೆಂಡರ್)ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಾಮಾನ್ಯ ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದವರಿಗೆ 200 ರೂ. ಅರ್ಜಿ ಶುಲ್ಕ, 8000 ರೂ. ಇಎಂಡಿ ಸೇರಿ ಒಟ್ಟು 8200 ರೂ., ಪ.ಜಾತಿ/ಪ.ಪಂಗಡಕ್ಕೆ ಸೇರಿದವರಿಗೆ 100 ರೂ. ಅರ್ಜಿ ಶುಲ್ಕ, 5000 ರೂ. ಇಎಂಡಿ ಸೇರಿ 5100 ರೂ.ಗಳನ್ನು ಶಿವಮೊಗ್ಗ ಕೆನರಾ ಬ್ಯಾಂಕ್ ಎಲ್ಲಾ ಶಾಖೆಗಳಲ್ಲಿ/ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ನ ಎಸ್.ಆರ್. ಶಾಖೆಗಳಲ್ಲಿ/ಇಂಡಿಯನ್ ಬ್ಯಾಂಕ್‍ನ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್‍ನ ಮೂಲಕ ಪಾವತಿಸತಕ್ಕದ್ದು.

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್‍ನೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿದ ಬ್ಯಾಂಕ್/ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದನ್ನು ಪಾವತಿಸಿ ಸ್ವೀಕೃತಿ/ರಶೀದಿ ಪಡೆದ ನಂತರವಷ್ಟೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದು.

ಮೀಸಲಾತಿ ಮತ್ತು ದಾಖಲೆ ವಿವರ:

ಪರಿಶಿಷ್ಟ ಜಾತಿ ಶೇ.30, ಪರಿಶಿಷ್ಟ ಪಂಗಡ ಶೇ.10, ಅಲ್ಪಸಂಖ್ಯಾತರು ಶೇ.10, ಸಾಮಾನ್ಯ ವರ್ಗ ಶೇ.50 ಇದ್ದು, ಅರ್ಜಿದಾರರ ಇತ್ತೀಚಿನ 01 ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಪ.ಜಾತಿ/ಪ.ಪಂ/ವಿಕಲಚೇತನ/ಹಿರಿಯ ನಾಗರೀಕ/ಮಾಜಿ ಸೈನಿ/ಸೈನಿಕರ ವಿಧವೆಯರು/ವಿಧುರರು/ ಸ್ವತಂತ್ರ ಯೋಧರು ಸಕ್ಷಮ ಪ್ರಾಧಿಕಾರದಿಮದ ಪಡೆದಂತಹ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿದಾರರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‍ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರ(ಲಭ್ಯವಿದ್ದಲ್ಲಿ) ಹೊಂದಿರಬೇಕು.

ಈ ಎಲ್ಲ ಮೂಲ ದಾಖಲಾತಿ ಹಾಗೂ ದಾಖಲಾತಿಗಳ ಸಂಖ್ಯೆಯನ್ನು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸುವುದು. ಅಪೂರ್ಣ ಮತ್ತು ತಪ್ಪು ಮಾಹಿತಿ ನೀಡಿದಲ್ಲಿ ಅರ್ಜಿದಾರರಿಗೆ ಯಾವುದೇ ತಿಳಿವಳಿಕೆ ನೀಡದೇ ಅರ್ಜಿ ತಿರಸ್ಕರಿಸಲಾಗುವುದು ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...