ಭಾರತೀಯ ಚಿತ್ರರಂಗ ಕಂಡಿದ್ದ ಅಪ್ರತಿಮ ನಟ ದೇವ್ ಆನಂದ್ರ 100ನೇ ವರ್ಷದ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಪ್ರಧಾನಿ ಮೋದಿ ಟ್ವೀಟ್ ಮೂಲಕ ಖ್ಯಾತ ನಟನನ್ನು ನೆನೆದಿದ್ದಾರೆ. ಪ್ರಧಾನಿ ಮೋದಿ ಖ್ಯಾತ ನಟ ದೇವ ಆನಂದ್ರ ಜೊತೆ ಇರುವ ಕೆಲವೊಂದು ಫೋಟೋಗಳನ್ನು ಎಕ್ಸ್ನಲ್ಲಿ ಶೇರ್ ಮಾಡಿದ್ದಾರೆ.
ಅವರ ಕತೆ ಹೇಳುವ ನೈಪುಣ್ಯತೆ ಹಾಗೂ ಸಿನಿಮಾ ಬಗ್ಗೆ ಇದ್ದ ಒಲವಿಗೆ ಬೇರೆ ಯಾವುದೇ ಸಾಟಿಯಿಲ್ಲ. ಅವರ ಸಿನಿಮಾಗಳು ಮನರಂಜನೆಯು ಮಾತ್ರವಲ್ಲದೇ ಬದಲಾಗುತ್ತಿರವ ಭಾರತೀಯ ಸಮಾಜ ಹಾಗೂ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವಂತೆ ಇದ್ದವು ಎಂದು ಟ್ವೀಟ್ ಮಾಡಿದ್ದಾರೆ.
ದೇವ್ ಆನಂದ್ ಕೇವಲ ನಟ ಮಾತ್ರವಲ್ಲದೇ ಬಾಲಿವುಡ್ ಜಗತ್ತಿನ ಹೆಸರಾಂತ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕನ ಕೆಲಸ ಕೂಡ ಮಾಡಿ ಸೈ ಎನಿಸಿದ್ದಾರೆ.
ದೇವ್ ಆನಂದ್ 1923ರ ಸೆಪ್ಟೆಂಬರ್ 25ರಂದು ಜನಿಸಿದ್ದರು. ಬಾಲಿವುಡ್ ಸಿನಿಮಾದ ಅತ್ಯಂತ ಯಶಸ್ವಿ ನಟರ ಪೈಕಿ ದೇವ್ ಆನಂದ್ ಕೂಡ ಒಬ್ಬರು. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ನಟ ದೇವ್ ಆನಂದ್ ಗೈಡ್, ಟ್ಯಾಕ್ಸಿ ಡ್ರೈವರ್, ಜ್ಯುವೆಲ್ ಥೀಫ್ ಹಾಗೂ ಸಿಐಡಿಯಂತಹ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜಾಲ್ ಸಿನಿಮಾದಲ್ಲಿ ಕಳ್ಳ ಸಾಗಾಣಿಕೆದಾರನಾಗಿ, ದುಷ್ಮನ್ ಸಿನಿಮಾದಲ್ಲಿ ತಲೆಮರೆಸಿಕೊಂಡ ಗ್ಯಾಂಗ್ ಸದಸ್ಯನಾಗಿ, ಕಾಲಾ ಬಜಾರ್ನಲ್ಲಿ ಬ್ಲಾಕ್ ಮಾರ್ಕೆಟ್ ಸದಸ್ಯನಾಗಿ ಹಾಗೂ ಬಾಂಬೆ ಕಾ ಬಾಬು ಸಿನಿಮಾದಲ್ಲಿ ಕೊಲೆಗಾರನಾಗಿ ನಟಿಸಿದ್ದಾರೆ.
ಭಾರತದ ಮೂರನೇ ಅತ್ಯನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸ್ವೀಕರಿಸಿದ್ದ ದೇವ್ ಆನಂದ್ ತಮ್ಮ 88ನೇ ವಯಸ್ಸಿನಲ್ಲಿ ಲಂಡನ್ನ ವಾಷಿಂಗ್ಟನ್ ಮೇಫೇರ್ ಹೋಟೆಲ್ನಲ್ಲಿ ಕೊನೆಯುಸಿರೆಳೆದಿದ್ದರು.