ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ನದಿಗಳು ಕೆರೆಯಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಹುವಲ್-ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಚಂದ್ರಭಾಗ ನದಿಯ ಹರಿವನ್ನು ತಡೆದಿದ್ದು, ಆ ಪ್ರದೇಶದ ಹಳ್ಳಿಯಲ್ಲಿ ವಾಸಿಸುವ ಸುಮಾರು 2,000 ಜನರು ಜೀವಭಯದಿಂದ ಬದುಕುವಂತೆ ಆಗಿದೆ. ಜಿಲ್ಲಾ ಉಪ ಆಯುಕ್ತ ನೀರಜ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹತ್ತಿರದ ಬೆಟ್ಟದ ಒಂದು ಭಾಗವು ನದಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ ಎಂದು ಹೇಳಿದರು. ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ತಜ್ಞರ ತಂಡ ಧಾವಿಸಿದೆ ಎಂದು ಹೇಳಿದರು.
ನಾಲದಾ ಗ್ರಾಮದ ಲಾಹೌಲ್-ಸ್ಪಿತಿಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಚಂದ್ರಭಾಗದ ಹರಿವು ಬ್ಲಾಕ್ ಆಗಿದೆ. ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಜೈ ರಾಮ್ ಠಾಕೂರ್, ‘’ಮಾಹಿತಿ ಬಂದ ತಕ್ಷಣ, ಉನ್ನತ ಮಟ್ಟದ ತಂಡವನ್ನು ಕಳುಹಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಲು ನನ್ನ ಕ್ಯಾಬಿನೆಟ್ ಸಹೋದ್ಯೋಗಿಯಾದ ಡಾ. ರಾಮಲಾಲ್ ಮಾರ್ಕಂಡ ಅವರು ತೆರಳಿದ್ದಾರೆ’’ ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್ ಖಾನ್
‘’ಇದೀಗ ಬಂದ ಮಾಹಿತಿ ಪ್ರಕಾರ, ನದಿಯ ಹರಿವು ತೆರೆಯುತ್ತಿದೆ. ಇದರಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ’’ ಎಂದು ಸಿಎಂ ಹೇಳಿದರು. ಸ್ಥಳೀಯ ಜನರು ನದಿ ತೀರಗಳು ಮತ್ತು ಭೂಕುಸಿತ ಸಂಭವಿಸುವ ಪ್ರದೇಶಗಳ ಬಳಿ ತೆರಳದಂತೆ ಸಿಎಂ ವಿನಮ್ರವಾಗಿ ವಿನಂತಿಸಿದ್ದಾರೆ.
ಇನ್ನು ಭೂಕುಸಿತ ಸಂಭವಿಸುತ್ತಿರುವ ಭುಕರ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕಡಿದಾದ ಬೆಟ್ಟದ ನಡುವೆ ಭಾರೀ ಪ್ರಮಾಣದ ಮಣ್ಣು, ಬಂಡೆಗಳು ಮತ್ತು ಇತರ ಭಗ್ನಾವಶೇಷಗಳು ಚಂದ್ರಭಾಗ ನದಿಯ ಮೇಲೆ ಬೀಳುತ್ತಿರುವ ದೃಶ್ಯ ಕಂಡುಬಂದಿದೆ.
ಕಳೆದ ಕೆಲವು ವಾರಗಳಿಂದ ಹಿಮಾಚಲ ಪ್ರದೇಶದಲ್ಲಿ ಹಲವು ಭೂಕುಸಿತಗಳು ಸಂಭವಿಸಿದ್ದು, ಹಲವಾರು ಸಾವು-ನೋವುಗಳಿಗೆ ಕಾರಣವಾಗಿದೆ. ಕಿನ್ನೌರ್ ನಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಿಂದ 14 ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಸೇರಿದಂತೆ ಅನೇಕ ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡಗಳು ಇಂದು ರಕ್ಷಣಾ ಕಾರ್ಯಗಳನ್ನು ಪುನರಾರಂಭಿಸಿವೆ. ಹಲವಾರು ಜನರು ಕಾಣೆಯಾಗಿದ್ದು, ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ₹ 4 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ₹ 50,000 ನೀಡುವುದಾಗಿ ಮುಖ್ಯಮಂತ್ರಿ ಠಾಕೂರ್ ಘೋಷಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.