ಕಳೆದ ವಾರ ವೈರಲ್ ಆದ 15 ದಿನದ ಹಿಂದಿನ ಘಟನೆಯ ಒಂದು ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇಬ್ಬರು ಏಕಾಏಕಿ ಸ್ಕೂಟರ್ನಿಂದ ಕೆಳಗೆ ಬೀಳುತ್ತಾರೆ, ಆದರೆ ಹಿಂಬದಿ ಬರುತ್ತಿದ್ದ ಸವಾರನಿಗೆ ಅವರು ತರಾಟೆಗೆ ತೆಗೆದುಕೊಳ್ಳುತ್ತಾರೆ, ಇಂಥದ್ದೊಂದು ವಿಡಿಯೊವನ್ನು ಬಹಳ ಮಂದಿ ನೋಡಿರಬಹುದು. ಆ ಮಹಿಳೆಯ ತರಾಟೆಗೆ ನೆಟ್ಟಿಗರು ಉಗಿದು ಉಪ್ಪಿನಕಾಯಿ ಹಾಕಿರಲೂ ಬಹುದು.
ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಮಹಿಳೆಯ ವರ್ತನೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಕ್ಲಿಪ್ ಮಧ್ಯಪ್ರದೇಶದ ಭೋಪಾಲ್ನ ವಿಐಪಿ ರಸ್ತೆಯಲ್ಲಿ ನಡೆದ ಘಟನೆಯದ್ದಾಗಿದೆ. ವ್ಯಕ್ತಿ ಜೊತೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆ ಏಕಾಏಕಿ ರಸ್ತೆಗೆ ಉರುಳುತ್ತಾರೆ. ಆದರೆ, ತಾವು ಉರುಳಿ ಬೀಳುವುದಕ್ಕೆ ಹಿಂದಿನಿಂದ ಬರುತ್ತಿದ್ದ ವಾಹನ ಸವಾರ ಕಾರಣ ಎಂಬುದು ಆಕೆಯ ಆರೋಪ.
ಆದರೆ ಅಪಘಾತ ಸಂಭವಿಸಿದಾಗ ಹಿಂದಿನ ವಾಹನ ಸವಾರನಾದ ವ್ಲಾಗರ್ ತಮ್ಮ ಬೈಕ್ ರೈಡ್ ಅನ್ನು ಚಿತ್ರೀಕರಿಸುತ್ತಿದ್ದರು. ಇದ್ದಕ್ಕಿದ್ದಂತೆ ಸ್ಕೂಟರ್ನಿಂದ ಬಿದ್ದ ಮಹಿಳೆ ಎದ್ದು ಬೈಕ್ ಸವಾರನ ಬಳಿಗೆ ಹೋದಳು, ನೀನೇ ಅಪಘಾತಕ್ಕೆ ಕಾರಣ, ಬೀಳುವಂತೆ ಮಾಡಿದ್ದು ಎಂದು ಆಕೆ ದೂಷಿಸುತ್ತಾಳೆ. ಆ ವ್ಯಕ್ತಿ ತಾನು ಘಟನೆಯನ್ನು ವಿಡಿಯೊ ಮಾಡಿದ್ದು, ನಾನು ಕಾರಣನಲ್ಲ ಎಂದು ಪುರಾವೆ ತೋರಿಸಬಲ್ಲೆ ಎಂದು ಹೇಳುತ್ತಾನೆ. ಅದೇ ವಿಡಿಯೋ ಈಗ ವೈರಲ್ ಆಗಿರುವುದಾಗಿದೆ.
ವಾಹನ ತಿರುಗಿಸುವಾಗ ಇಂಡಿಕೇಟರ್ ಬಳಸದಿರುವುದು ಮತ್ತು ನಿಧಾನವಾಗಿ ಲೇನ್ ಬದಲಾಯಿಸುವ ಇತರ ದ್ವಿಚಕ್ರ ವಾಹನ ಸವಾರರನ್ನು ಗಮನ ಹರಿಸದಿರುವುದು ಮಹಿಳೆಯ ತಪ್ಪಾಗಿದೆ. ಇನ್ನೊಂದು ಸಂಗತಿ ಎಂದರೆ ಅವರ ಸ್ಕೂಟರ್ ಎಡಕ್ಕೆ ಚಲಿಸಲು ಪ್ರಯತ್ನಿಸಿದಾಗ, ಒಂದು ಬ್ರೇಕ್ ಹಾಕಿದ್ದು, ಸ್ಕೂಟರ್ ಬಿದ್ದಿದೆ.
ರೈತರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮುಂಗಾರು ಶೇ. 24 ರಷ್ಟು ಕುಂಠಿತ
ವಿಡಿಯೊದಲ್ಲಿ ಕಾಣುತ್ತಿರುವ ಸ್ಕೂಟರ್ ಹೀರೋ ಡ್ಯುಯೆಟ್. ಆ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಸ್ಕೂಟರ್ 10 ಇಂಚಿನ ಟೈರ್ಗಳ ಮೇಲೆ ಸವಾರಿ ಮಾಡಿದ್ದರಿಂದ ಸ್ಕೂಟರ್ ಪಲ್ಟಿಯಾಗುತ್ತದೆ.
ಡ್ಯುಯೆಟ್ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಸಹ ಹೊಂದಿದ್ದು, ರೈಡರ್ ಒಂದು ಬ್ರೇಕ್ ಅನ್ವಯಿಸಿದಾಗ ಇನ್ನೊಂದು ಬ್ರೇಕ್ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ಘಟನೆಯಲ್ಲಿ ಸ್ಕೂಟರ್ಗೆ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅಳವಡಿಸಿರುವುದರಿಂದ ಎರಡೂ ಟೈರ್ಗಳು ತಕ್ಷಣವೇ ಲಾಕ್ ಆಗಿದ್ದು, ಸ್ಕೂಟರ್ ಬೀಳುವಂತೆ ಮಾಡಿದೆ.
ಅದೃಷ್ಟವಶಾತ್ ಹಿಂಬದಿ ಸವಾರ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇಲ್ಲವಾದರೆ ಬಿಸಿಬಿಸಿ ಕಜ್ಜಾಯ ಪಡೆಯುವ ಸಂದರ್ಭವಿತ್ತು.