ದುರ್ಬಲ ಅಥವಾ ಕಡಿಮೆ ಬಲಿಷ್ಠ ಪ್ರಾಣಿಗಳನ್ನು ತಿಂದು ಬಲಿಷ್ಠ ಪ್ರಾಣಿಗಳು ಬದುಕುವುದು ಕಾಡಿನ ಅಥವಾ ನಿಸರ್ಗದ ನಿಯಮ. ಅದರಲ್ಲೂ ಜಿಂಕೆಗಳಂತೂ ಕಾಡಿನ ಬಹುತೇಕ ಪ್ರಾಣಿಗಳಿಗೆ ಆಹಾರವಾಗುತ್ತವೆ. ಆದರೆ, ಇತ್ತೀಚೆಗೆ ವೈರಲ್ ಆದ ವೀಡಿಯೊದಲ್ಲಿ ಮಾತ್ರ ಅನತಿ ದೂರದಲ್ಲಿದ್ದ ಚಿರತೆಗೇ ಜಿಂಕೆಯೊಂದು ಟಕ್ಕರ್ ಕೊಟ್ಟಿದೆ.
ಹೌದು, ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿಯಾಗಿರುವ ಸುಶಾಂತ ನಂದಾ ಅವರು ವಿಡಿಯೊ ಒಂದನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಬೇಲಿಯ ಈಚೆ ಇರುವ ಜಿಂಕೆಯೊಂದು ತನ್ನ ಪಾಡಿಗೆ ತಾನು ಹುಲ್ಲು ತಿನ್ನುತ್ತಿರುತ್ತದೆ. ಅತ್ತ, ಹಸಿದುಕೊಂಡಿದ್ದ ಚಿರತೆಯು ಜಿಂಕೆಯ ಮೇಲೆ ಎರಗಲು ಮುಂದಾಗುತ್ತದೆ. ಆದರೆ, ಮಧ್ಯೆ ತಂತಿ ಬೇಲಿ ಇರುವ ಕಾರಣ ಚಿರತೆಯು ಜಿಂಕೆಯನ್ನು ತಿನ್ನಲು ಆಗಲಿಲ್ಲ.
ಒಮ್ಮೆ ಯತ್ನಿಸಿದರೂ ಆಗಲಿಲ್ಲ, ಎರಡನೇ ಬಾರಿಗೆ ಯತ್ನಿಸಿದರೂ ಅದು ವಿಫಲವಾಯಿತು. ಹೀಗೆ ಹಲವು ಬಾರಿ ಚಿರತೆಯು ಎರಗಿ ತಿನ್ನಲು ಯತ್ನಿಸಿದರೂ ಸ್ವಲ್ಪವೂ ಎದೆಗುಂದದ ಜಿಂಕೆಯು, ಚಿರತೆಯ ಎದುರೇ ಆತ್ಮವಿಶ್ವಾಸದಿಂದ ನಿಂತಿದ್ದರ ಕುರಿತು ಜಾಲತಾಣದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
’ಜಿಂಕೆಯ ಆತ್ಮವಿಶ್ವಾಸ ನನ್ನಲ್ಲೂ ಇದ್ದಿದ್ದರೆ ಚೆಂದ’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ’ಚಿರತೆಗೇಕೆ ಬೇಲೆ ಮೇಲಿಂದ ಜಿಗಿಯಲು ಆಗಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಹಲವಾರು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆದರೆ, ವಿಡಿಯೊ ಯಾವಾಗಿನದು, ಎಲ್ಲಿ ಇದನ್ನು ವಿಡಿಯೊ ಮಾಡಲಾಗಿದೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೈತ್ಯ ಚಿರತೆಯೇ ಎದುರು ನಿಂತರೂ ಜಗ್ಗದ ಜಿಂಕೆಯ ಆತ್ಮವಿಶ್ವಾಸ ಮಾತ್ರ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗಿದೆ.