ಬೇಕಾಗುವ ಸಾಮಾಗ್ರಿಗಳು : ಗೋಧಿ ರವಾ 1 ಕಪ್, ಹೆಚ್ಚಿದ ಬಾಳೆ ಹಣ್ಣು 1/2 ಕಪ್, ಸಕ್ಕರೆ 2 ಕಪ್, ಹಾಲು 2 ಕಪ್, ತುಪ್ಪ 1 ಕಪ್, ಏಲಕ್ಕಿ ಪೌಡರ್ ಚಿಟಿಕೆ, ಒಣ ದ್ರಾಕ್ಷಿ, ಗೋಡಂಬಿ, ಬದಾಮ್
ಮಾಡುವ ವಿಧಾನ : ಮೊದಲು ಬಾಣಲೆಗೆ ಎರಡು ಚಮಚ ತುಪ್ಪ ಸುರಿದು ಸಣ್ಣ ಉರಿಯಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಗೂ ಹೆಚ್ಚಿದ ಬದಾಮ್‌ನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಗೋಧಿ ರವಾವನ್ನು ಬಾಣಲೆಗೆ ಸುರಿದುಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ರವಾ ಹುರಿದ ಪರಿಮಳ ಬಂದು ಅದು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಅದಕ್ಕೆ ಹೆಚ್ಚಿದ ಬಾಳೆಹಣ್ಣನ್ನು ಹಾಕಿ ಮತ್ತೆ ಹುರಿಯಿರಿ.
ಬಾಳೆ ಹಣ್ಣಿನ ಚೂರುಗಳನ್ನು ಸೌಟಿನಲ್ಲಿ ನುರಿಯುತ್ತಾ ಹುರಿಯಿರಿ. ನಂತರ ಆ ಮಿಶ್ರಣಕ್ಕೆ ಸಕ್ಕರೆ ಸೇರಿಸಿ ಎರಡು ಕಪ್ ಕುದಿಯುವ ಹಾಲು ಹಾಕಿ ತಿರುವುತ್ತಾ ಇರಿ. ರವಾ ಮತ್ತು ಬಾಳೆಹಣ್ಣಿನ ಮಿಶ್ರಣದಲ್ಲಿ ಸಕ್ಕರೆ ಕರಗಿದ ತಕ್ಷಣ ತುಪ್ಪ ಸುರಿದು ಮತ್ತೆ ಸರಿಯಾಗಿ ತಿರುವಿ. ರವಾ ಬೇಯಲು ಸ್ವಲ್ಪ ನೀರು ಬೇಕು ಅಂತ ನಿಮಗೆ ಅನ್ನಿಸಿದರೆ ಕುದಿಯುವ ನೀರನ್ನ ಅಷ್ಟಷ್ಟಾಗಿ ಸೇರಿಸಿ ತಿರುವುತ್ತಿರಿ. ರವಾದೊಂದಿಗಿದ್ದ ದ್ರವವೆಲ್ಲ ಆರಿ ಮಡ್ಡಿಯಂತಾದರೆ ಶೀರಾ ಸಿದ್ಧ ಎಂದು ಅರ್ಥ. ನಂತರ ಮೊದಲೇ ಹುರಿದು ಇಟ್ಟುಕೊಂಡಿದ್ದ ಡ್ರೈಫ್ರುಟ್ಸ್ ಹಾಕಿ ಶೃಂಗರಿಸಿದರೆ ಬಿಸಿ ಬಿಸಿ ಹಾಲು- ಬಾಳೆಹಣ್ಣಿನ ಶೀರಾ ಸವಿಯಲು ಸಿದ್ಧ.