ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಮನೆಮದ್ದನ್ನು ತಯಾರಿಸಬಹುದು.
8 ರಿಂದ 10 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಪೇಸ್ಟ್ ಮಾಡಿಕೊಳ್ಳಿ. ಅದರಿಂದ ಅರ್ಧ ಚಮಚ ರಸ ತೆಗೆಯಿರಿ. ಇದಕ್ಕೆ ಚಿಟಿಕೆ ಉಪ್ಪು ಬೆರೆಸಿ ಮಕ್ಕಳಿಗೆ ಕುಡಿಸಿ. ಸತತ ಏಳು ದಿನ ಇದನ್ನು ನೀರಿನೊಂದಿಗೆ ಕುಡಿಸುವುದರಿಂದ ಕಫ ನಿವಾರಣೆಯಾಗುತ್ತದೆ.
ಕಾಳುಮೆಣಸು ಪುಡಿಗೆ ಸಮಪ್ರಮಾಣದಲ್ಲಿ ಜೇನು ಬೆರೆಸಿ ಮಕ್ಕಳಿಗೆ ನೆಕ್ಕಲು ಕೊಡುವುದರಿಂದಲೂ ಕಫ, ಕೆಮ್ಮು ಕಡಿಮೆಯಾಗುತ್ತದೆ. ಅಮೃತಬಳ್ಳಿ, ಸಾಮ್ರಾಣಿ ಸೊಪ್ಪಿನ ರಸದಿಂದಲೂ ಶೀತವನ್ನು ಕಡಿಮೆ ಮಾಡಬಹುದು.
ಇದನ್ನು ಹಸಿಯಾಗಿಯೂ ಸೇವಿಸಬಹುದು, ಇಲ್ಲವಾದರೆ ಕಷಾಯ ತಯಾರಿಸಿ ತುಸು ಬೆಲ್ಲ ಬೆರೆಸಿ ಮಕ್ಕಳಿಗೆ ಕುಡಿಸಬಹುದು.