ಹೊಳೆಯುವ ಚರ್ಮವನ್ನ ಪಡೆಯುವುದಕ್ಕಾಗಿ ನೀವು ಯಾವಾಗಲೂ ದುಬಾರಿ ಫೇಶಿಯಲ್ ಮಾಡಿಸಬೇಕು ಅಂತೇನೂ ಇಲ್ಲ.
ತಾಳ್ಮೆಯಿಂದ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಮತ್ತು ಹೊಳೆಯುವ ಸುಂದರ ಚರ್ಮ ನಿಮ್ಮದಾಗಬಹುದು. ಅದೆಷ್ಟೋ ಚಿಕ್ಕ ಚಿಕ್ಕ ಸರಳ ಮನೆಮದ್ದಿನಿಂದಲೇ ಚರ್ಮದ ಅಂದ ಹೆಚ್ಚಬಲ್ಲದು. ಅಂಥ ಸರಳ ಬ್ಯೂಟಿ ಟ್ರೀಟ್ ಮೆಂಟ್ ಗಳು ಇಲ್ಲಿವೆ ನೋಡಿ.
ಗ್ಲಿಸರಿನ್
ಔಷಧ ಅಂಗಡಿಯಲ್ಲಿ ಸುಲಭವಾಗಿ ದೊರೆಯುವಂಥ ಗ್ಲಿಸರಿನ್ ಚರ್ಮದ ಆರೋಗ್ಯವನ್ನ ಹೆಚ್ಚಿಸುವಂಥ ಉತ್ಪನ್ನ. ಇದನ್ನ ಆಯ್ಲಿ, ಡ್ರೈ, ಸೀವಿಯರ್ ಡ್ರೈ ಹೀಗೆ ಎಲ್ಲಾ ತರಹದ ಚರ್ಮಗಳಿಗೂ ಬಳಸಬಹುದು. ಮೊಡವೆಗಳು, ಕಲೆಗಳು, ಸುಕ್ಕು ತೊಡೆದುಹಾಕಲು ಗ್ಲಿಸರಿನ್ ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಹತ್ತಿಯ ಉಂಡೆಯನ್ನ ಗ್ಲಿಸರಿನ್ ನಲ್ಲಿ ಅದ್ದಿ ಮೃದುವಾಗಿ ಚರ್ಮದ ಮೇಲೆ ಮಸಾಜ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮುಂಚೆ ಮುಖವನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಗ್ಲಿಸರಿನ್ ಲೇಪಿಸಿಕೊಂಡು ಮಲಗಬೇಕು.
ಆಲೀವ್ ಆಯಿಲ್
ಚರ್ಮದ ಆರೋಗ್ಯವನ್ನ ಹೆಚ್ಚಿಸಲು ಆಲೀವ್ ಆಯಿಲ್ ಸಹಕಾರಿ. ಶುದ್ಧ ಆಲಿವ್ ಎಣ್ಣೆಯನ್ನ ಅಂಗೈಗೆ ಹಾಕಿಕೊಂಡು ಹದವಾಗಿ ತಿಕ್ಕಿದ ನಂತರ ಮುಖಕ್ಕೆ ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು. ಮುಖ ಮತ್ತು ಕತ್ತಿನ ಭಾಗಗಳಿಗೆ ಮಸಾಜ್ ಮಾಡುವುದರಿಂದ ಚರ್ಮ ಕಪ್ಪಾಗುವುದನ್ನ ತಡೆಗಟ್ಟಬಹುದು. ಡ್ರೈ ಸ್ಕಿನ್‌ನಿಂದ ಉಂಟಾಗುವ ಕಡಿತದಂಥ ಸಮಸ್ಯೆಗಳೂ ಉಪಶಮನವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುಂಚೆ ಆಲೀವ್ ಆಯಿಲ್ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಹುದು.
ಹಾಲು
ಇನ್ನೂ ಬಿಸಿ ಮಾಡಿರದ ಕಚ್ಚಾ ಹಾಲು ಕೂಡ ಚರ್ಮದ ಆರೋಗ್ಯವನ್ನ ಹೆಚ್ಚಿಸಬಲ್ಲ ಒಂದೊಳ್ಳೆಯ ಔಷಧಿ. ಹಾಲಿನಿಂದ ಚರ್ಮದ ಮೃದುತ್ವ ಹೆಚ್ಚಬಲ್ಲದು ಮತ್ತು ಚರ್ಮದ ರಂಧ್ರಗಳನ್ನು ಆಳವಾಗಿ ಶುದ್ಧೀಕರಿಸಬಲ್ಲದು. ರಾತ್ರಿ ಮಲಗುವುದಕ್ಕೂ 10-15 ನಿಮಿಷಗಳ ಮುಂಚೆ ಕಚ್ಚಾ ಹಾಲನ್ನು ಮುಖಕ್ಕೆ ಲೇಪಿಸಿಕೊಳ್ಳಿ. ನಂತರ ಲೇಪಿಸಿಕೊಂಡ ಹಾಲು ಸಂಪೂರ್ಣ ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಆಪಲ್ ಸೈಡರ್ ವಿನೇಗರ್
ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವಂಥ ‘ಆಪಲ್ ಸೈಡರ್ ವಿನೇಗರ್’ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ. ಚರ್ಮದ ಮೇಲೆ ಕಾಣಿಸಿಕೊಳ್ಳುವ ವೆರಿಕೋಸ್ ವೇನ್ಸ್ ನಂಥ ಸಮಸ್ಯೆಗೆ ಈ ಆಪಲ್ ಸೈಡರ್ ವಿನೇಗರ್ ಲೇಪನ ಸಿದ್ಧೌಷಧ. ಆಗಷ್ಟೇ ಕಾಣಿಸಿಕೊಳ್ಳುತ್ತಿರುವ ವೆರಿಕೋಸ್ ವೇನ್ಸ್ ಭಾಗದ ಮೇಲೆ ಆಪಲ್ ಸೈಡರ್ ವಿನೇಗರ್ ಬಳಸಿ ಮಸಾಜ್ ಮಾಡಿಕೊಳ್ಳುವುದರಿಂದ ಕ್ರಮೇಣ ಸಮಸ್ಯೆಯಿಂದ ಉಪಶಮನ ಸಾಧ್ಯವಿದೆ. ಅಲ್ಲದೆ ಇಡೀ ದೇಹಕ್ಕೆ ಆಗಾಗ ಆಪಲ್ ಸೈಡರ್ ವಿನೇಗರ್ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ ಒಳ್ಳೆಯದು.
ಐಸ್ ಮಸಾಜ್
ಕಣ್ಣಿನ ಸುತ್ತ ಕಪ್ಪು ವರ್ತುಲವಾಗಿದ್ದರೆ ಅಥವಾ ಕಣ್ಣು ಊದಿಕೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಐಸ್ ಮಸಾಜ್ ಮಾಡಿಕೊಳ್ಳಬಹುದು. ತೆಳುವಾದ ಬಟ್ಟೆಯಲ್ಲಿ ಐಸ್ ಇಟ್ಟು ಅದರಿಂದ ಮಸಾಜ್ ಮಾಡಿಕೊಳ್ಳಬಹುದು. ಇಲ್ಲವೇ ನೇರವಾಗಿ ಐಸ್ ನಿಂದಲೇ ಮಸಾಜ್ ಮಾಡಿಕೊಳ್ಳಬಹುದು. ತೀವ್ರ ಕಡಿತದಿಂದ ಕೈ, ಕಾಲು, ಚರ್ಮ ಕಿರಿಕಿರಿಯನ್ನ ಅನುಭವಿಸುತ್ತಿದ್ದರೂ ಕೂಡ ಈ ಐಸ್ ಮಸಾಜ್ ನಿಂದ ತಕ್ಷಣದ ಸಮಾಧಾನ ಲಭಿಸುತ್ತದೆ.
ರೋಸ್ ವಾಟರ್
ರೋಸ್‌ವಾಟರ್ ನ್ನ ದಿನನಿತ್ಯ ಬೇಕೆಂದಾಗಲೆಲ್ಲ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಲ್ಲದು. ಔಷಧ ಅಂಗಡಿಗಳಲ್ಲಿ ಅಥವಾ ಕಾಸ್ಮೆಟಿಕ್ಸ್ ಲಭಿಸುವ ಅಂಗಡಿಗಳಲ್ಲಿ ಈ ರೋಸ್ ವಾಟರ್ ಲಭ್ಯವಾಗುತ್ತದೆ. ಅಲ್ಲದೆ ಮನೆಯಲ್ಲಿಯೂ ಕೂಡ ರೋಸ್ ವಾಟರ್ ಸಿದ್ಧಗೊಳಿಸಿಕೊಳ್ಳಬಹುದು.
ಜೇನುತುಪ್ಪ
ಚರ್ಮದ ಆರೋಗ್ಯವನ್ನ ಹೆಚ್ಚಿಸುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲರ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಈ ಅದ್ಭುತ ಸೌಂದರ್ಯ ಪೂರಕ ವಸ್ತುವಾಗಿರುವ ಜೇನುತುಪ್ಪವನ್ನ ದಿನನಿತ್ಯ ಸ್ನಾನಕ್ಕೂ ಮುಂಚೆ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ ಯೌವ್ವನ ಸಿಗಬಲ್ಲದು. ಮೃದು ಚರ್ಮ ನಿಮ್ಮದಾಗಬಲ್ಲದು.